ನವದೆಹಲಿ, ಮಾ. 15 (Daijiworld News/MB) : ಕೊರೊನಾ ವೈರಸ್ ಸೋಮಕಿನಿಂದಾಗಿ ಸಾವನ್ನಪ್ಪಿದವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಶನಿವಾರ ಘೋಷಿಸಿದ ಕೇಂದ್ರ ಸರ್ಕಾರ ಒಂದು ಗಂಟೆಗಳ ಬಳಿಕ ಯು ಟರ್ನ್ ತೆಗೆದುಕೊಂಡಿದ್ದು ತನ್ನ ಘೋಷಣೆಯನ್ನು ಹಿಂದೆ ತೆಗೆದುಕೊಂಡಿದೆ.
ಕೊರೊನಾ ವೈರಸ್ನ್ನು ಅಧಿಸೂಚಿತ ವಿಪತ್ತು ಎಂದು ಘೋಷಿಸಿದ್ದ ಕೇಂದ್ರ ಸರ್ಕಾರ ಸೋಂಕಿನಿಂದಾಗಿ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಹಾಗೆಯೇ ಇದು ವಿಶೇಷ ಒಂದು ಬಾರಿಯ ವ್ಯವಸ್ಥೆ ಎಂದು ಹೇಳಿತ್ತು.
ಕೇಂದ್ರ ಗೃಹ ಸಚಿವಾಲಯ ತನ್ನ ಪತ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕು ಪೀಡಿತರ ಆಸ್ಪತ್ರೆಯ ವೆಚ್ಚವನ್ನು ರಾಜ್ಯ ಸರ್ಕಾರಗಳು ನಿಗದಿ ಮಾಡಿದೆ ಎಂದು ತಿಳಿಸಿತ್ತು.
ಆದರೆ ಇದಾದ ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಲಾದ ಪರಿಷ್ಕೃತ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಕ್ರಮಗಳು, ಮಾದರಿ ಸಂಗ್ರಹ ಹಾಗೂ ಪರೀಕ್ಷೆಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಮಾತ್ರ ಹೇಳಲಾಗಿದೆ.
ಅಗತ್ಯವಾದ ಉಪಕರಣಗಳು ಹಾಗೂ ಪ್ರಯೋಗಾಲಯಗಳನ್ನು ಹೊಂದುವುದು ರಾಜ್ಯ ವಿಪತ್ತು ಪರಿಹಾರ ನಿಧಿ ಒಳಗಡೆ ಬರುತ್ತದೆ ಎಂದು ಹೇಳಿದೆ.
ಈ ಹೊಸ ಅಧಿಸೂಚನೆಯಲ್ಲಿ ಸೋಂಕಿನಿಂದಾಗಿ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಹಾಗೂ ಸೋಂಕು ಪೀಡಿತರ ಆಸ್ಪತ್ರೆಯ ವೆಚ್ಚವನ್ನು ಬರಿಸುವ ಷರತ್ತನ್ನು ಹಿಂತೆಹೆಯಲಾಗಿದೆ.
ಈ ಹಿಂದಿನ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಶಿಬಿರದಲ್ಲಿರುವ ರೋಗಿಗಳು ಮತ್ತು ಜನರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರ, ನೀರಿ ಬಟ್ಟೆ ಮತ್ತು ವೈದ್ಯಕೀಯ ನೆರವು ಒದಗಿಸುವುದು ಎಂದು ಸರಕಾರವು ತಿಳಿಸಿದೆ.
ಹೆಚ್ಚುವರಿ ಪರೀಕ್ಷಾ ಕೇಂದ್ರಗಳು, ಪೊಲೀಸರು, ಆರೋಗ್ಯ ರಕ್ಷಣೆ ಹಾಗೂ ಮುನ್ಸಿಪಲ್ ಅಧಿಕಾರಿಗಳಿಗೆ ರಕ್ಷಣಾ ಉಪಕರಣಗಳು, ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್ಗಳು ಹಾಗೂ ಇತರ ಅಗತ್ಯ ಉಪಕರಣಗಳ ವೆಚ್ಚವನ್ನು ಪಾವತಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಲಾಗುವುದಿಲ್ಲ. ಉಪಕರಣಗಳ ಒಟ್ಟು ವೆಚ್ಚ ನಿಧಿಯ ವಾರ್ಷಿಕ ಹಂಚಿಕೆಯ ಶೇ. 10 ನ್ನು ಮೀರುವಂತಿಲ್ಲ ಎಂದು ಸರ್ಕಾರವು ತಿಳಿಸಿದೆ.
ಭಾರತದಲ್ಲಿ ಈವರೆಗೆ 80 ಕ್ಕೂ ಅಧಿಕ ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು ಆ ಪೈಕಿ ಕರ್ನಾಟಕದ ಕಲಬುರಗಿಯಲ್ಲಿ ಓರ್ವರು ಹಾಗೂ ದೆಹಲಿಯಲ್ಲಿ ಓರ್ವರು ಮೃತಪಟ್ಟಿದ್ದಾರೆ.