ಬೆಂಗಳೂರುಮಾ. 15 (Daijiworld News/MB) : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ಸೂಪರ್ ಸಿ.ಎಂ ರೀತಿ ವರ್ತನೆ ಮಾಡುತ್ತಿದ್ದಾರೆ. ಬಿಎಸ್ವೈ ಕುಟುಂಬ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿಯಲ್ಲಿ ಶಾಸಕರ ಗುಂಪು ಗರಂ ಆಗಿದೆ.
ಸರ್ಕಾರದ ಎಲ್ಲ ವಿಚಾರಗಳಲ್ಲೂ ವಿಜಯೇಂದ್ರ ಮತ್ತು ಅವರ ಬೆನ್ನಿಗೆ ನಿಂತಿರುವ ಗುಂಪು ಮೂಗುತೂರಿಸುತ್ತದೆ. ಇದನ್ನು ತಡೆಯಬೇಕು ಎಂದು ಶಾಸಕರು ಹಕ್ಕೊತ್ತಾಯ ಮಂಡಿಸಿರುವ ಅನಾಮಧೇಯ ಪತ್ರ ಹರಿದಾಡುತ್ತಿದೆ.
ಶನಿವಾರ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಲು ಶಾಸಕರ ಗುಂಪು ಯತ್ನಿಸಿದೆ. ಉಮೇಶ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್, ಮುರುಗೇಶ ನಿರಾಣಿ ನೇತೃತ್ವದ ತಂಡ ನಡ್ಡಾ ಭೇಟಿಗೆ ಅವಕಾಶ ಕೇಳಿದ್ದು "ಇಂದು ಸಾಧ್ಯವಾಗದು, ಮಂಗಳವಾರ ದೆಹಲಿಗೆ ಬನ್ನಿ" ಎಂದು ನಡ್ಡಾ ತಿಳಿಸಿರುವುದಾಗಿ ಮಾಧ್ಯಮವೊ೦ದು ವರದಿ ಮಾಡಿದೆ.
ಈ ಕುರಿತಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕರೊಬ್ಬರು, "ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಅನುದಾನ ಕೋರಿ ಮುಖ್ಯಮಂತ್ರಿ ಭೇಟಿ ಮಾಡಿದರೆ, ವಿಜಯೇಂದ್ರನ ಕಡೆ ತೋರಿಸುತ್ತಾರೆ. ಇನ್ನು ಎಷ್ಟು ದಿನ ಇದನ್ನು ಸಹಿಸಿಕೊಂಡು ಕೂರುವುದು" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.