ಮಧ್ಯಪ್ರದೇಶ, ಮಾ.15 (Daijiworld News/MB) : ಬಿಕ್ಕಟ್ಟಿನಲ್ಲಿರುವ ಮಧ್ಯಪ್ರದೇಶ ಸರ್ಕಾರಕ್ಕೆ ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್, ಸೋಮವಾರ ವಿಶ್ವಾಸ ಮತ ಸಾಬೀತು ಮಾಡುವಂತೆ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಸೂಚಿಸಿದ್ದಾರೆ.
22 ಶಾಸಕರು ರಾಜೀನಾಮೆ ಸಲ್ಲಿಸಿರುವ ವಿಚಾರವನ್ನು ಸ್ಪೀಕರ್ ತಿಳಿಸಿದ್ದಾರೆ. ಹಾಗಾಗಿ ಸಂವಿಧಾನದ ವಿಧಿ 174 ಮತ್ತು 175(2) ಅಡಿಯಲ್ಲಿ ಮಾರ್ಚ್ 16ರಂದು ವಿಶ್ವಾಸ ಮತ ಸಾಬೀತು ಮಾಡವಂತೆ ತಿಳಸಿದ್ದೇನೆ, ಬೆಳಿಗ್ಗೆ 11 ಗಂಟೆಗೆ ನಾನು ಪ್ರಾಸ್ತವಿಕ ಭಾಷಣ ಆಡಲಿದ್ದು, ಅದಾದ ನಂತರ ವಿಶ್ವಾಸ ಮತ ಸಾಬೀತುಪಡಿಸಲಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಈಗಾಗಲೇ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮಾರ್ಚ್ 16 ರಿಂದ ಬಜೆಟ್ ಅಧಿವೇಶನ ಆರಂಭವಾಗುವುದರಿಂದ ಅಂದೇ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
22 ಬಂಡಾಯ ಶಾಸಕರ ಪೈಕಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಸ್ವೀಕರಿಸಿದ್ದು 228 ಸದಸ್ಯ ಬಲದ ವಿಧಾನಸಭೆ ಸದಸ್ಯರ ಸಂಖ್ಯೆ 222 ಆಗಿದೆ.
ಕಾಂಗ್ರೆಸ್ನಲ್ಲಿ 108 ಶಾಸಕರು ಇದ್ದು ಮೈತ್ರಿಪಕ್ಷಗಳ ಬೆಂಬಲದೊಂದಿಗೆ 115 ಶಾಸಕರ ಬೆಂಬಲ ಪಡೆದುಕೊಂಡಿದೆ. ಬಹುಮತಕ್ಕಾಗಿ 113 ಶಾಸಕರ ಅಗತ್ಯವಿದ್ದು, ಕಾಂಗ್ರೆಸ್ 2 ಶಾಸಕರನ್ನು ಹೆಚ್ಚಿಗೆ ಹೊಂದಿದೆ. ಬಿಜೆಪಿ 107 ಸದಸ್ಯರನ್ನು ಹೊಂದಿದ್ದು ಬಹುಮತ ಸಾಬೀತಿಗಾಗಿ ಆರು ಶಾಸಕರ ಕೊರತೆಯಿದೆ.
ಮಾರ್ಚ್ 10 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಪೈಕಿ ಸಚಿವ ಸ್ಥಾನದಿಂದ ಆರು ಶಾಸಕರನ್ನು ರಾಜ್ಯಪಾಲರು ಈಗಾಗಲೇ ವಜಾಗೊಳಿಸಿದ್ದಾರೆ. ಅವರು ತಮ್ಮ ಬಳಿ ಹಾಜರಾಗಲು ಎರಡು ಅವಕಾಶ ನೀಡಿದ್ದರೂ ವಿಚಾರಣೆಗೆ ಅವರು ಹಾಜರಾಗಲಿಲ್ಲ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವರು ನೀಡಿರುವ ಹೇಳಿಕೆಗಳನ್ನು ಆಧರಿಸಿ ವಿಧಾನಸಭೆ ಸದಸ್ಯರಾಗಿ ಉಳಿಯಲು ಅವರು ಸಮರ್ಥವಾಗಿಲ್ಲ ತೀರ್ಮಾನಿಸಿರುವುದಾಗಿ ಸ್ಪೀಕರ್ ಆದೇಶದಲ್ಲಿ ತಿಳಿಸಿದ್ದಾರೆ.
ಇತ್ತ ಕಡೆ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಹೊರಡಿಸಿದ್ದು ಬಜೆಟ್ ಅಧಿವೇಶನದಲ್ಲಿ ಪ್ರತಿಯೊಬ್ಬರು ಹಾಜರಿರಬೇಕು. ಸರ್ಕಾರದ ಪರ ಮತ ಹಾಕಬೇಕು ಎಂದು ತಿಳಿಸಿದ್ದು ಸ್ಪೀಕರ್ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಆರೋಪಿಸಿದ್ದಾರೆ.