ನವದೆಹಲಿ, ಮಾ.15 (DaijiworldNews/PY) : ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನಲೆ ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ 131 ವಿದ್ಯಾರ್ಥಿಗಳು ಸೇರಿದಂತೆ 234 ಜನರನ್ನು ಭಾರತಕ್ಕೆ ಇರಾನ್ನಿಂದ ಸುರಕ್ಷಿತವಾಗಿ ಕರೆತರಲಾಗಿದೆ.
ಕೊರೊನಾ ವೈರಸ್ ಭೀತಿಯಿಂದಾಗಿ ಇರಾನ್ ಎಲ್ಲಾ ವಿದೇಶಗಳಿಗೆ ವಿಮಾನ ಸೇವೆ ರದ್ದುಗೊಳಿಸಿತ್ತು. ವಿಮಾನ ನಿಲ್ದಾಣದಲ್ಲಿ ಇರಾನ್ನಿಂದ ಬಂದ ವಿದ್ಯಾರ್ಥಿಗಳು ಸೇರಿದಂತೆ ಇತರ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗಿದ್ದು, ರಾಜಸ್ಥಾನದ ಜೈಸಲ್ಮೇರ್ನಲ್ಲಿ ಇವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಪರೀಕ್ಷಿಸಲಾಗುತ್ತದೆ.
ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕಾರಣಕರ್ತರಾದ ಇರಾನ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಧನ್ಯವಾದ ಸಲ್ಲಿಸಿದ್ಧಾರೆ. ಇರಾನ್ನಲ್ಲಿ ಕೊರೊನಾ ವೈರಸ್ನಿಂದ ಈಗಾಗಲೇ 611 ಜನರು ಸಾವನ್ನಪ್ಪಿದ್ದು, 12 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಈ ವೈರಸ್ಗೆ ಶನಿವಾರ ಒಂದೇ ದಿನ 97 ಜನರು ಮೃತಪಟ್ಟಿದ್ದಾರೆ.
ಏರ್ ಇಂಡಿಯಾ ವಿಮಾನವು ಕಳೆದ ಕೆಲವು ದಿನಗಳ ಹಿಂದೆ ಇರಾನ್ನಿಂದ ಹಲವು ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿತ್ತು.