ಬೆಂಗಳೂರು, ಮಾ.15 (DaijiworldNews/PY) : "ಕೊರೊನಾ ಸೋಂಕಿತರಿಗೆ ರಾಜ್ಯದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದು ಮುಂಜಾಗ್ರತಾ ಕ್ರಮ. ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಲಿ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ ಕುಮಾರಸ್ವಾಮಿ ಅವರು, "ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ.ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು" ಎಂದರು.
"ಹಲವು ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು ರಾಜ್ಯದಲ್ಲಿ ಖಾಲಿ ಉಳಿದಿವೆ. ಕೊರೊನಾ ವೈರಸ್ ಸೋಂಕಿತರಿಗೆ ಅವುಗಳನ್ನು ಚಿಕಿತ್ಸೆ ನೀಡುವ ಪ್ರತ್ಯೇಕ ಕೇಂದ್ರಗಳಾಗಿ ಪರಿವರ್ತಿಸಬೇಕು. ಈ ಕೇಂದ್ರಗಳನ್ನು ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ ತೆರೆಯಬೇಕು. ಅವರಿರುವಲ್ಲಿಯೇ ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ವ್ಯವಸ್ಥೆಯಾಗಬೇಕು" ಎಂದು ಹೇಳಿದ್ದಾರೆ.
"#coronavirus ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ" ಎಂದು ತಿಳಿಸಿದ್ದಾರೆ.
"ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಪರಿವರ್ತನೆಯಾಗಿ ಜನಜೀವನ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ" ಎಂದು ಹೇಳಿದ್ಧಾರೆ.