ಜಮ್ಮು-ಕಾಶ್ಮೀರ, ಮಾ.15 (Daijiworld News/MB) : ಅನಂತ್ ನಾಗ್ ಜಿಲ್ಲೆಯ ವಾತ್ರಿಗಾಮ ಗ್ರಾಮದಲ್ಲಿ ಭಾನುವಾರ ನಾಲ್ಕು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಹತ್ಯೆಯಾದ ನಾಲ್ವರು ಉಗ್ರರ ಪೈಕಿ ಓರ್ವನನ್ನು ತಾರಿಖ್ ಅಹಮ್ಮದ್ ಎಂದು ಗುರುತಿಸಲಾಗಿದ್ದು ಆತ ಅನಂತ್ ನಾಗ್ ಜಿಲ್ಲೆಯ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಎಂದು ಹೇಳಲಾಗಿದೆ. ಇನ್ನುಳಿದ ಮೂವರು ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ಸದಸ್ಯರಾಗಿದ್ದರು ಎಂದು ವರದಿ ತಿಳಿಸಿದೆ.
ಭದ್ರತಾ ಪಡೆಗೆ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆ ವಾತ್ರಿಗಾಮ ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲಿ ತಪಾಸಣೆ ನಡೆಸಿದೆ. ಈ ಸಂದರ್ಭದಲ್ಲಿ ಉಗ್ರರು ಗುಂಡು ಹಾರಿಸಿದ್ದು ಪ್ರತಿದಾಳಿ ನಡೆಸಿ ಭದ್ರತಾ ಪಡೆ ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಿದ್ದಾರೆ.