ಬೆಳಗಾವಿ, ಮಾ.15 (Daijiworld News/MB) : ಕೊರೊನಾ ಸೋಂಕು ಭೀತಿ ಹಿನ್ನಲೆಯಲ್ಲಿ ಕಲಬುರ್ಗಿ ಸೇರಿದಂತೆ ಯಾವುದೇ ಕಡೆಯಲ್ಲೂ ರೈಲುಗಳ ಸೇವೆ ಸ್ಥಗಿತಗೊಳಿಸುವುದಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ರೈಲುಗಳ ಸ್ವಚ್ಛತೆಯನ್ನು ನಿತ್ಯವೂ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ನಿಲ್ದಾಣದಲ್ಲೂ ಅರಿವು ಮೂಡಿಸಲಾಗುತ್ತಿದೆ" ಎಂದು ಹೇಳಿದರು.
ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಸುರಕ್ಷಿತವಾದ ವಾತಾವರಣವಿದೆ. ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಜನರು ಆತಂಕ ಪಡುವುದು ಬೇಡ ಎಂದು ಅವರು ತಿಳಿಸಿದ್ದಾರೆ.