ಬೆಂಗಳೂರು, ಮಾ.15 (Daijiworld News/MB) : ಕೊರೊನಾ ಸೋಂಕು ರಾಜ್ಯದಲ್ಲಿ ಹರಡದಂತೆ ಸರ್ಕಾರ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು ಯಾವುದೇ ಸಭೆ ಸಮಾರಂಭಗಳನ್ನು, ಅದ್ಧೂರಿ ವಿವಾಹಗಳನ್ನು ಆಯೋಜಿಸದಂತೆ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಉಲ್ಲಂಘನೆ ಮಾಡಿದ್ದಾರೆ.
ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತ್ರವಲ್ಲದೇ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಸಚಿವರಾದ ಬಸವರಾಜ್ ಬೊಮ್ಮಾಯಿ, ಶ್ರೀಮಂತ ಪಾಟೀಲ, ಶಾಸಕರಾದ ಗಣೇಶ್ ಹುಕ್ಕೇರಿ, ಮಹೇಶ್ ಕುಮಟಳ್ಳಿ ಈ ವಿವಾಹದಲ್ಲಿ ಭಾಗಿಯಾಗಿದ್ದಾರೆ.
ಸಭೆ, ಸಮಾರಂಭ ಹಾಗೂ ವಿವಾಹ ಕಾರ್ಯಕ್ರಮಗಳಲ್ಲಿ ನೂರಾರು ಜನರು ಸೇರುತ್ತಾರೆ. ಅಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ಸೂಚನೆಯಂತೆ ಸರ್ಕಾರ ಸಭೆ, ಸಮಾರಂಭಗಳನ್ನು ಮುಂದೂಡುವಂತೆ ಆದೇಶಿಸಿದೆ. ಹಾಗೆಯೇ ಮಾಲ್, ಪಬ್ ಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಶಾಲಾ ಕಾಲೇಝುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
ಜವಬ್ದಾರಿಯುತ ಸ್ಥಾನದಲ್ಲಿರುವವರು ಆದೇಶವನ್ನು ಪಾಲಿಸಿ ಇತರರಿಗೂ ಮಾದರಿಯಾಗಬೇಕು ಆದರೆ ಮುಖ್ಯಮಂತ್ರಿಯೇ ಈ ಆದೇಶವನ್ನು ಪಾಲಿಸದೆ ಇರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಟೀಕೆ ಮಾಡಿದ್ದಾರೆ.