ಕಲಬುರಗಿ, ಮಾ.15 (Daijiworld News/MB) : ಕೊರೊನಾ ಸೋಂಕಿನ ಕುರಿತು ವದಂತಿಗಳಿಗೆ ಜನತೆ ಕಿವಿಗೊಡಬಾರದು. ಯಾರು ತಪಾಸಣೆಗೆ ಒಳಗಾಗುವುದಿಲ್ಲವೋ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ಕೂಡಲೇ ಜನರು ಮೃತರಾಗುವುದಿಲ್ಲ. ಯಾರಿಗೂ ಭಯಬೇಡ, ಚಿಕಿತ್ಸೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ ಎಂದು ಹೇಳಿದರು.
ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ಕಲಬುರಗಿಯ ವೃದ್ಧನ ಮನೆ ಸುತ್ತ-ಮುತ್ತ ಐದು ಕೀ.ಮೀ. ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದ ಜನರನ್ನು ಹೊರ ಬಾರದಂತೆ ಸೂಚನೆ ನೀಡಲಾಗಿದೆ. ಆಹಾರದ ಕಿಟ್ ಸೇರಿದಂತೆ ಬೇಕಾದ ವ್ಯವಸ್ಥೆ ಅವರಿಗೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದೇನೆ. ಜನರ ಭಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಸೋಂಕು ಪತ್ತೆಗಾಗಿ ಮೂರು ದಿನದಲ್ಲಿ ಲ್ಯಾಬ್ ಪ್ರಾರಂಭ ಮಾಡಲಾಗುತ್ತದೆ ಎಂದರು.
ವೃದ್ದನ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಇನ್ನೂ ಒಬ್ಬರ ವರದಿ ಬರಬೇಕಾಗಿದೆ. ಆ ವರದಿ ಏನೇ ಇರಲಿ, ಜನರು ಭಯ ಪಡಬೇಕಾಗಿಲ್ಲ. ವರದಿ ಯಾವ ರೀತಿ ಬಂದರೂ ಅವರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಹೇಳಿದರು.
ಕಲಬುರಗಿಗೆ ವಿವಿಧ ದೇಶಗಳಿಂದ 16 ಜನ ಬಂದಿದ್ದಾರೆ. ಅವರನ್ನು ಕೂಡಾ ಮನೆಯಲ್ಲೇ ಇರಿಸಿ ನಿಗಾ ಇರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆರೋಗ್ಯ ಸಚಿವ ಶ್ರೀರಾಮುಲು ನಗರದ ಜಿಮ್ಸ್ ಹಾಗೂ ಇಎಸ್ಐ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.