ಬೆಳಗಾವಿ, ಮಾ.15 (DaijiworldNews/PY) : ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮವಾಗಿ ನಡೆಸುವ ತಪಾಸಣೆ ಸಿಎಂ ಬಿಎಸ್ವೈ ಅವರು ಒಳಗಾಗಿಲ್ಲ.
ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ವ್ಯಾಪಿಸಿರಯವ ಭೀತಿಯಿಂದಾಗಿ ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಯಂತ್ರ ಅಳವಡಿಸಿದೆ. ಸಿಬ್ಬಂದಿಗಳು, ಸೋಂಕಿತರನ್ನು ಪತ್ತೆ ಮಾಡುವ ಇನ್ಫ್ರಾರೆಡ್ ಥರ್ಮಾಮೀಟರ್ ಯಂತ್ರ ಉಪಯೋಗಿಸುತ್ತಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಸಿಎಂ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಲು ಸಿದ್ದರಾಗಿದ್ದರು. ಆದರೆ, ಮುಖ್ಯಮಂತ್ರಿ ಅವರು ವಿಶ್ರಾಂತಿ ಕೊಠಡಿಯಿಂದ ನೇರವಾಗಿ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ಪೊಲೀಸರಿಂದ ಗೌರವ ವಂದನೆ ಪಡೆದು, ಅಲ್ಲಿಂದ ತೆರಳಿದರು.
ನಂತರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ಅವರಿಗೆ ಕೊರೊನಾ ವೈದ್ಯಕೀಯ ತಪಾಸಣೆ ಮಾಡಲಾಯಿತು. ಮೂವರ ಆರೋಗ್ಯವೂ ಸ್ಥಿರವಾಗಿದೆ ಎಂದು ಸ್ಥಳದಲ್ಲೇ ವರದಿ ನೀಡಿದರು.