ನವದೆಹಲಿ, ಮಾ.15 (DaijiworldNews/PY) : "ಗ್ರಾಹಕರಿಗೆ ಕಚ್ಚಾ ತೈಲ ದರದಲ್ಲಿ ಉಂಟಾಗಿರುವ ಕುಸಿತದ ಲಾಭವನ್ನು ವರ್ಗಾಯಿಸಿ ಎಂದರೆ, ನಮ್ಮ ಜಾಣ ಪ್ರಧಾನಿ ಅವರು ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ಧಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
"ಕಚ್ಚಾ ತೈಲದ ಬೆಲೆಯು ಅಂತರಾಷ್ಟ್ರೀಯ ಮಾರುಪಕಟ್ಟೆಯಲ್ಲಿ ಕುಸಿತವಾಗಿದೆ. ನಾನು ಮೂರು ದಿನಗಳ ಹಿಂದೆ ಗ್ರಾಹಕರಿಗೆ ಇದರ ಲಾಭವನ್ನು ವರ್ಗಾಯಿಸುವಂತೆ ಆಗ್ರಹಿಸಿದ್ದೆ. ಜಾಣ ಪ್ರಧಾನಿ ಅವರು ನನ್ನ ಸಲಹೆಯನ್ನು ಪರಿಗಣಿಸದೇ, ತೈಲದ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ದಾರೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಲ್ಲದೇ, ಗ್ರಾಹಕರಿಗೆ ತೈಲ ಬೆಲೆ ಕುಸಿತದ ಲಾಭವನ್ನು ವರ್ಗಾಯಿಸದ ಸರ್ಕಾರದ ಕ್ರಮದ ಕುರಿತ ಪ್ರಶ್ನೆಗಳನ್ನು ನಿರ್ಲಕ್ಷಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೊವನ್ನು ರಾಹುಲ್ ತಮ್ಮ ಟ್ವೀಟ್ನೊಂದಿಗೆ ಸೇರಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಮೂರು ದಿನಗಳ ಹಿಂದೆ ಮಾಡಿದ್ದ ಟ್ವೀಟ್ನಲ್ಲಿ, "ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರವೊಂದನ್ನು ಕೆಡುವುದರಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಶೇ. 35ರಷ್ಟು ದರ ಕುಸಿದಿರುವುದು ಗೊತ್ತೇ ಆಗಿಲ್ಲ. ಗ್ರಾಹಕರಿಗೆ ತೈಲ ದರ ಕುಸಿತವನ್ನು ಪ್ರಧಾನಿ ವರ್ಗಾಯಿಸಬೇಕು. ಪೆಟ್ರೋಲ್ ದರವನ್ನು 60ಕ್ಕೆ ನಿಗದಿ ಮಾಡಬೇಕು" ಎಂದು ತಿಳಿಸಿದ್ದರು.
ತೈಲ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಮುಖವಾಗಿದೆ. ಆದರೆ, ಶನಿವಾರ ಕೇಂದ್ರವು ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ದರ ಇಳಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಹಾಗಾಗಿ, ಸುಂಕದ ಹೊರೆ ಗ್ರಾಹಕರಿಗೆ ಬೀಲುವುದಿಲ್ಲವಾದರೂ, ದರ ಇಳಿಕೆಗೆ ಪ್ರಯೋಜನವೂ ಸಿಗದಂತಾಗಿದೆ.
ವಿಶೇಷ ಅಬಕಾರಿ ಸುಂಕವನ್ನು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರಿಗೆ 3ರಂತೆ ಕೇಂದ್ರ ಏರಿಕೆ ಮಾಡಿದೆ. 39 ಸಾವಿರ ಕೋಟಿ ಹೆಚ್ಚುವರಿ ವರಮಾನ ಇದರಿಂದ ಸಂಗ್ರಹವಾಗಲಿದೆ.