ಅಹಮದಾಬಾದ್, ಮಾ.15 (DaijiworldNews/PY) : ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ಗುಜರಾತ್ನ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ಧಾರೆ. ಇದೇ 26ರಂದು ಗುಜರಾತ್ನಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಾಗಾಗಿ, ಆಪರೇಷನ್ ಕಮಲ ಈ ರಾಜೀನಾಮೆ ಹಿಂದೆ ಕೆಲಸ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ನ ನಾಲ್ವರು ಶಾಸಕರ ರಾಜೀನಾಮೆಯನ್ನು ಪಡೆದಿದ್ಧೇನೆ. ರಾಜೀನಾಮೆ ಸಲ್ಲಿಸಿದ ಶಾಸಕರು ಯಾರು ಎನ್ನುವುದನ್ನು ಸೋಮವಾರ ವಿಧಾನಸಭೆಯಲ್ಲಿ ಪ್ರಕಟಿಸುವುದಾಗಿ ತ್ರಿವೇದಿ ಅವರು ಹೇಳಿದ್ಧಾರೆ.
ವಿಧಾನಸಭೆಯಲ್ಲಿ 182 ಸದಸ್ಯಬಲದ ಕಾಂಗ್ರೆಸ್ನ 73 ಶಾಸಕರಿದ್ದಾರೆ. ಅವರಲ್ಲಿ ನಾಲ್ವರು ರಾಜೀನಾಮೆ ನೀಡಿದರೆ ಆ ಪಕ್ಷದ ಬಲವು 69ಕ್ಕೆ ಇಳಿಯಲಿದೆ.
ತನ್ನ 14 ಶಾಸಕರನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯ ಕಾರಣಕ್ಕೆ ಶಾಸಕರ ಖರೀದಿ ನಡೆಯಬಹುದು ಎಂಬ ಅನುಮಾನದಲ್ಲಿ ಜೈಪುರಕ್ಕೆ ಸ್ಥಳಾಂತರ ಮಾಡಿತ್ತು.
ಬಿಜೆಪಿ ಅಭಯ್ ಭಾರದ್ವಾಜ್, ರಮೀಲಾ ಬಾರಾ ಮತ್ತು ನರಹರಿ ಅಮಿನ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದೆ.
ಬಿಜೆಪಿ ವಿಧಾನಸಭೆಯಲ್ಲಿ ಹೊಂದಿರುವ ಸದಸ್ಯಬಲದಲ್ಲಿ ಎರಡು ಕ್ಷೇತ್ರಗಳನ್ನು ಮಾತ್ರ ಗೆಲ್ಲಲು ಸಾಧ್ಯ. ವಿರೋಧ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಬೇಕು ಅಥವಾ ಕಾಂಗ್ರೆಸ್ನ ಶಾಸಕರು ಪಕ್ಷಾಂತರ ಮಾಡಿದರೆ ಮೂರನೇ ಸ್ಥಾನವನ್ನು ಗೆಲ್ಲಲು ಸಾಧ್ಯ.
ಇಬ್ಬರು ಕಾಂಗ್ರೆಸ್ನಿಂದ ಕಣದಲ್ಲಿದ್ಧಾರೆ. ಹಿರಿಯ ಮುಖಂಡರಾದ ಶಕ್ತಿಸಿಂಹ ಗೋಹಿಲ್ ಮತ್ತು ಭರತಸಿಂಹ ಸೋಲಂಕಿ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.