ನವದೆಹಲಿ, ಮಾ.15 (DaijiworldNews/PY) : ಕೊರೊನಾ ವೈರಸ್ ಭಾರತ ಸೇರಿ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ಸಾರ್ಕ್ ದೇಶಗಳ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಸಭೆಯು ಸಂಜೆ ಐದು ಗಂಟೆಗೆ ಪ್ರಾರಂಭವಾಗಿದ್ದು, ಸಭೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ, ಅಪ್ಘಾನಿಸ್ತಾನ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಮುಖ್ಯಸ್ಥರು ಭಾಗಿಯಾಗಿ ಕೊರೊನಾ ವಿರುದ್ಧ ತೆಗೆದುಕೊಳ್ಳಬೇಕಿರುವ ಎಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು.
"150ಕ್ಕಿಂತಲೂ ಕಡಿಮೆ ಕೊರೊನಾ ಸೋಂಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಆದರೂ ನಾವು ಹೆಚ್ಚು ಜಾಗರೂಕರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಜಾಗೃತರಾಗಿ, ಭಯಬೇಡ. ಕೊರೊನಾ ವೈರಸ್ ವಿರುದ್ದ ಹೋರಾಡಲು ಭಾರತ ಪ್ರಯತ್ನಿಸುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದ್ಧಾರೆ.
"ಭಾರತಕ್ಕೆ ವಿದೇಶಗಳಿಂದ ಆಗಮಿಸುವವರನ್ನು ಪರೀಕ್ಷೆ ಒಳಪಡಿಸುವ ಕಾರ್ಯಕ್ರಮವನ್ನು ಭಾರತ ಜನವರಿಯ ಮಧ್ಯ ಭಾಗದಿಂದ ಪ್ರಾರಂಭಿಸಿದೆ. ಅದಲ್ಲದೇ, ಪ್ರವಾಸದ ಮೇಲೆಯೂ ಸಾಕಷ್ಟು ನಿಯಮಗಳನ್ನು ಹೇರಿದೆ. ಹಂತ ಹಂತವಾಗಿ ಆತಂಕ ನಿವಾರಿಸುವ ಸಲುವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶಕ್ಕೆ ಹೊರ ದೇಶದಲ್ಲಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಭಾರತಕ್ಕೆ ಈವರೆಗೆ 1,400 ಮಂದಿಯನ್ನು ಕರೆತಂದಿದ್ದೇವೆ. ನೆರೆ ರಾಷ್ಟ್ರಗಳ ಕೆಲ ನಾಗರಿಕರನ್ನೂ ಸೋಂಕು ಪೀಡಿತ ದೇಶದಿಂದ ಇದೇ ಸಂದರ್ಭ ಭಾರತ ಕರೆ ತಂದಿದೆ" ಎಂದು ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ನಲ್ಲಿ ತಿಳಿಸಿದ್ಧಾರೆ.
ನಂತರ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ದೇಶಗಳ ಮುಖ್ಯಸ್ಥರು ಆಯಾ ದೇಶಗಳಲ್ಲಿ ಕೊರೊನಾ ವೈರಸ್ ತಡೆಗೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.