ಕಲಬುರ್ಗಿ, ಮಾರ್ಚ್ 15 (DaijiworldNews/SM): ಕೊರೊನಾ ಸೋಂಕಿನ ಕುರಿತ ವದಂತಿಗಳಿಗೆ ಜನತೆ ಕಿವಿಗೊಡಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಯಾರು ತಪಾಸಣೆಗೆ ಒಳಗಾಗುವುದಿಲ್ಲವೋ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ನಗರದ ಜೇಮ್ಸ್ ಆಸ್ಪತ್ರೆ ಹಾಗೂ ಇಎಸ್ ಐ ಆಸ್ಪತ್ರೆಯಲ್ಲಿ ಭಾನುವಾರ ಕೊರೊನಾ ಸೋಂಕಿತರು ಮತ್ತು ಶಂಕಿತರ ಚಿಕಿತ್ಸೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ತಕ್ಷಣ ಅನಾಹುತವಾಗುವುದಿಲ್ಲ. ಯಾರೂ ಹೆದರಬಾರದು. ಚಿಕಿತ್ಸೆಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ ಎಂದರು.
ಬಫರ್ ಝೋನ್ : ಕೊರೊನಾ ಸೋಂಕಿಗೆ ಕಲಬುರಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯ ಸುತ್ತ-ಮುತ್ತ ೫ ಕಿ.ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಆ ಪ್ರದೇಶದಿಂದ ಜನರು ಹೊರಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಅವರ ಮನೆಗಳಿಗೆ ಆಹಾರದ ಕಿಟ್ ಸೇರಿದಂತೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ. ವಿವಿಧ ದೇಶಗಳಿಂದ ಕಲಬುರ್ಗಿಗೆ ೧೬ ಜನ ಬಂದಿದ್ದಾರೆ. ಅವರನ್ನೂ ಮನೆಯಲ್ಲೇ ಇಟ್ಟು ನಿಗಾ ವಹಿಸಲಾಗುತ್ತಿದೆ ಎಂದರು.