ನವದೆಹಲಿ, ಮಾ.16 (DaijiworldNews/PY) : ಮಾರಣಾಂತಿಕ ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 6 ಸಾವಿರ ದಾಟಿದೆ. ಕೊರೊನಾ ವೈರಸ್ಗೆ ಸ್ಪೇನ್ನಲ್ಲಿ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಭಾನುವಾರ ಒಂದೇ ದಿನ 105 ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿ 2 ಸಾವಿರ ಮಂದಿಗೆ 24 ಗಂಟೆಗಳ ಅವಧಿಯಲ್ಲಿ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7753 ಆಗಿದೆ. ಇಟಲಿ, ಇರಾನ್ನಲ್ಲೂ (113), ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ, ಜಾಗತಿಕವಾಗಿ ಮೃತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ.
ಒಟ್ಟು 6,036 ಮಂದಿ ವಿಶ್ವದಲ್ಲಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 1,59,844 ಆಗಿದೆ. ಇದರಲ್ಲಿ ಚೀನಾದಲ್ಲಿ ಸಾವಿನ ಸಂಖ್ಯೆ 3,199 ಆಗಿದ್ದರೂ, ಸದ್ಯ ಸೋಂಕಿತರು ಹಾಗೂ ಮೃತರ ಪ್ರಮಾಣ ಅಲ್ಲಿ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಭಾನುವಾರ ಕೊರೊನಾ ಪೀಡಿತ ಪ್ರದೆಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 450 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಇಟಲಿಯಿಂದ 218 ಮಂದಿಯನ್ನು ಎರಡು ಏರ್ಇಂಡಿಯಾ ವಿಮಾನಗಳ ಮೂಲಕ 230 ಭಾರತೀಯರನ್ನು ಇರಾನ್ನಿಂದ ವಾಪಸ್ ಕರೆತರಲಾಗಿದೆ. ಇವರನ್ನು ಪ್ರತ್ಯೇಕವಾಗಿ ನಿಗಾ ಕೇಂದ್ರಗಳಲ್ಲಿ ಇರಿಸಲಾಗಿದ್ದು, 14 ದಿನಗಳ ಕಾಲ ಇಲ್ಲೇ ಇರಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕೊರೊನಾ ವೈರಸ್ಗೆ ಮಹಾರಾಷ್ಟ್ರದ ಬುರ್ಲಾನಾದಲ್ಲಿ ಶನಿವಾರ ಶಂಕಿತ 71 ವರ್ಷದ ವೃದ್ಧನ ಸಾವಿಗೆ ಕೊರೊನಾ ಕಾರಣವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರ ರಕ್ತದ ಮಾದರಿ ಪರೀಕ್ಷೆಯ ವರದಿಯಲ್ಲಿ ಕೊರೊನಾ ನೆಗೆಟಿವ್ ಎಂಬುದು ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ, ಭಾನುವಾರ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯ ಕೊರೊನಾ ವೈರಸ್ನ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಕೊರೊನಾ ಹಿನ್ನೆಲೆ ದೇಗುಲ ಭೇಟಿ ಸದ್ಯಕ್ಕೆ ಮಾಡುವುದು ಬೇಡ ಎಂದು ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಆಡಳಿತ ಮಂಡಳಿ ತಿಳಿಸಿದ್ದು, ಕೆಲವೊಂದು ಸೇವೆಗಳನ್ನೇ ರದ್ದು ಮಾಡಿದೆ. ಇಂತ ತೀರ್ಮಾನವನ್ನು ಇ೦ದೇ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿದೆ.
ರದ್ದು ಮಾಡಲಾಗಿರುವ ಸೇವೆಗಳಲ್ಲಿ ಕೆಲವೊಂದು ಸೇವೆಗಳು ದಿನವಹಿ ಹಾಗೂ ವಾರಕ್ಕೊಮ್ಮೆ ನಡೆಸುವ ಸೇವೆಗಳಿವೆ. ದೇಗುಲಕ್ಕೆ ಈ ಮೂಲಕ ಭಕ್ತರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಆಡಳಿತ ಮಂಡಳಿ ಹೊಂದಿದೆ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಗ್ ತಿಳಿಸಿದ್ಧಾರೆ.
ಸುಪ್ರೀಂ ಕೋರ್ಟ್ ಆವರಣಕ್ಕೂ ಕೊರೊನಾ ಭೀತಿ ಹಿನ್ನೆಲೆ ಪ್ರವಾಸಿಗರ ಪ್ರವೇಶಕ್ಕೂ ನಿರ್ಬಂಧ ಹಾಕಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಸಂಕೀರ್ಣ ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತಿತ್ತು. ಆದರೆ, ಪ್ರವಾಸಕ್ಕೆ ಈಗ ಬ್ರೇಕ್ ಹಾಕಲಾಗಿದ್ದು, ಮುಂದಿನ ಆದೇಶದವರೆಗೆ ಸುಪ್ರೀಂ ಕೋರ್ಟ್ ತನ್ನ ಮ್ಯೂಸಿಯಂ ಅನ್ನು ಮುಚ್ಚಲು ತೀರ್ಮಾನಿಸಿದೆ.
ಕೊರೊನಾ ಭೀತಿಯಿಂದಾಗಿ, ರೈಲುಗಳಲ್ಲಿನ ಸ್ಲೀಪರ್ ಕೋಚ್ಗಳಲ್ಲಿ ಇಡಲಾಗಿದ್ದ ಎಲ್ಲಾ ರೀತಿಯ ಹೊದಿಕೆಗಳನ್ನು ವಾಪಾಸ್ ಪಡೆಯಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ತಮ್ಮದೇ ಆದ ಹೊದಿಕೆಗಳನ್ನು ಪ್ರಯಾಣಿಕರು ತರುವಂತೆ ಮನವಿ ಮಾಡಿದೆ. ಸ್ಲೀಪರ್ ಕೋಚ್ಗಳ ಕಿಟಕಿಯ ಪರದೆಗಳು, ಹೊದಿಕೆಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಅವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಹಾಗಾಗಿ, ತಮ್ಮದೇ ಆದ ಹೊದಿಕೆಗಳನ್ನು ಪ್ರಯಾಣಿಕರು ತರಬೇಕು ಎಂದು ಇಲಾಖೆ ಪ್ರಕಟಿಸಿದೆ.