ನವದೆಹಲಿ, ಮಾ.16 (DaijiworldNews/PY) : ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ 110ಕ್ಕೆ ಏರಿದೆ. ಮೊದಲ ಪ್ರಕರಣ ಉತ್ತರಖಂಡದಲ್ಲಿ ಬೆಳಕಿಗೆ ಬಂದಿದ್ದು, ತಲಾ ಒಂದು ಹೊಸ ಪ್ರಕರಣಗಳು ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೆಹಲಿ ಹಾಗೂ ಕರ್ನಾಟಕದಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳು ಈ ಪ್ರಕರಣಗಳ ಒಟ್ಟು ಸಂಖ್ಯೆಯಲ್ಲಿ ಒಳಗೊಂಡಿದ್ಧಾರೆ.
ಭಾನುವಾರ ಉತ್ತರಖಂಡದಲ್ಲಿ ಮೊದಲ ಕೊರೊನಾ ವೈರಸ್ ವರದಿಯಾಗಿದ್ದು, ಇದುವರೆಗೆ ದೆಹಲಿಯಲ್ಲಿ ಏಳು ಹಾಗೂ ಉತ್ತರ ಪ್ರದೇಶದಲಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ 7, ಮಹಾರಾಷ್ಟ್ರ 32, ಲಡಾಖ್ನಲ್ಲಿ ಮೂರು ಹಾಗೂ ಜಮ್ಮು-ಕಾಶ್ಮೀರ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಇದೆ ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ 3, ರಾಜಸ್ಥಾನದಲ್ಲಿ ಎರಡು, ಕೇರಳದಲ್ಲಿ 22 ಪ್ರಕರಣಗಳು ವರದಿಯಾಗಿವೆ. ಆಂಧ್ರಪ್ರದೇಶ, ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ.
ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರು ಹಿನ್ನೆಲೆ ಕೇಂದ್ರ ಸರ್ಕಾರವು ಮಾರಣಾಂತಿಕ ವೈರಸ್ ಅನ್ನು ಅಧಿಸೂಚಿತ ವಿಪತ್ತು ಎಂದು ಘೋಷಿಸಿ ಶನಿವಾರ ಆದೇಶ ಹೊರಡಿಸಿದೆ.
ಚೀನಾದ ವುಹಾನ್ನಲ್ಲಿ ಕಳೆದ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, 100ಕ್ಕೂ ಅಧಿಕ ದೇಶಗಳಲ್ಲಿ ಇದುವರೆಗೂ ವ್ಯಾಪಿಸಿದ್ದಲ್ಲದೇ, ಈ ಸೋಂಕು 1,20,000 ಸಾವಿರ ಜನರಿಗೆ ತಗುಲಿದೆ. ಕೊರೊನಾ ವೈರಸ್ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.