ಬೆಂಗಳೂರು, ಮಾ 16 ( Daijiworld News/MSP): ಮಾಹಿತಿ ಮರೆಮಾಚಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿರೋಧ ತೋರಿದ ಕೊರೋನಾ ವೈರಸ್ ಹರಡಿದ ಆರೋಪದಲ್ಲಿ ಗೂಗಲ್ ಟೆಕ್ಕಿಯ ಪತ್ನಿ ಮತ್ತು ಆಕೆಯ ತಂದೆಯ ವಿರುದ್ಧ ದೇಶದಲ್ಲಿಯೇ ಮೊದಲ ಬಾರಿಗೆ ಆಗ್ರಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಗ್ರೀಸ್ ಪ್ರವಾಸ ಮುಗಿಸಿ ಬಂದಿದ್ದ ಗೂಗಲ್ ಸಂಸ್ಥೆಯ ಸಿಬ್ಬಂದಿ ಮತ್ತಾತನ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಆಕೆ ತನಗೆ ಸೋಂಕು ತಗುಲಿರುವ ಬಗ್ಗೆ ಯಾರಿಗೂ ತಿಳಿಸದೆ ಆಗ್ರಾದಲ್ಲಿರುವ ತವರು ಮನೆಗೆ ತೆರಳಿದ್ದರು. ಇದಲ್ಲದೆ, ಮಹಿಳೆ ಕುಟುಂಬ ಸದಸ್ಯರು ಆಕೆ ತಪಾಸಣೆಗೊಳಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಬೆಂಗಳೂರಿನಿಂದ ಪರಾರಿಯಾಗಿದ್ದ ಆ ಮಹಿಳೆಯಲ್ಲಿ ಕೋವಿಡ್- 19 ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿತ್ತು.
ಕೊರೋನಾ ವೈರಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ 25 ವರ್ಷದ ಬೆಂಗಳೂರಿನ ಮಹಿಳೆ ಹಾಗೂ ಆಕೆಯ ತಂದೆಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಮಾರ್ಚ್ 6 ರಂದು ಹನಿಮೂನ್ ನಿಂದ ಹಿಂತಿರುಗಿದ್ದ ಇವರನ್ನು ತಪಾಸಣೆಗೆ ಒಳಪಡಿಸಿದಾಗ ಮಾರ್ಚ್ 7 ರಂದು ಆಕೆಯ ಪತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದರಿಂದ ಭೀತಿಗೊಂಡ ಆ ಮಹಿಳೆ ತಪಾಸಣೆ ಹಾಗೂ ಪ್ರತ್ಯೇಕ ಕೊಠಡಿಯಲ್ಲಿ ಇರುವುದರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ಆಗ್ರಾಕ್ಕೆ ಪರಾರಿಯಾಗಿದ್ದಳು ಎಂಬುದಾಗಿ ಆಗ್ರಾದ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 13 ರಂದು ಸಂಬಂಧಿತ ಅಧಿಕಾರಿಗಳು ಆಗ್ರಾದಲ್ಲಿನ ಆಕೆಯ ಮನೆಗೆ ತೆರಳಿದ್ದಾಗ ದೆಹಲಿ ಮೂಲಕ ಬೆಂಗಳೂರಿಗೆ ಆ ಮಹಿಳೆ ತೆರಳಿರುವುದಾಗಿ ಸುಳ್ಳು ಹೇಳಿದ್ದರು. ನಂತರ ಆಕೆಯ ಪೋನ್ ಪರಿಶೀಲಿಸಿದಾಗ ಆಕೆ ಆಗ್ರಾದಲ್ಲಿನ ತನ್ನ ಮನೆಯಲ್ಲಿಯೇ ಇರುವುದು ಕಂಡುಬಂದಿತ್ತು ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಂಗ್ ಹೇಳಿದ್ದಾರೆ.
ನಂತರ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಕ್ತದ ಮಾದರಿಯನ್ನು ಎರಡನೇ ಸುತ್ತಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಐಪಿಸಿ ಸೆಕ್ಷನ್ 269 ( ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇರುವಾಗ ನಿರ್ಲಕ್ಷ್ಯ ) ಹಾಗೂ ಸೆಕ್ಷನ್ 270ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.