ನವದೆಹಲಿ, ಮಾ.16 (Daijiworld News/MB) : ವಿಶ್ವಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಕುರಿತಾಗಿ ನಡೆದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ವಿಡಿಯೋ ಕಾನ್ಫೆರೆನ್ಸ್ನಲ್ಲಿ ಕೊರೊನಾ ವಿರುದ್ಧವಾಗಿ ಹೋರಾಡಲು ತುರ್ತುನಿಧಿಯನ್ನು ಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದು ಭಾರತ ಅದಕ್ಕಾಗಿ 10 ಮಿಲಿಯನ್ ಡಾಲರ್ಗಳನ್ನು ನೀಡುವ ಪ್ರಸ್ತಾಪವನ್ನು ಮಾಡಿದರು.
ಹಾಗೆಯೇ ವಿಡಿಯೋ ಕಾನ್ಫೆರೆನ್ಸ್ನಲ್ಲಿದ್ದ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ ಎಂಟು ಸದಸ್ಯ ರಾಷ್ಟ್ರಗಳಿಗೆ ತಾಂತ್ರಿಕ ಮತ್ತು ಮಾನವಶಕ್ತಿ ಸಹಾಯವನ್ನು ಮಾಡುವ ಕುರಿತಾಗಿ ಕೊರೊನಾ ವೈರಸ್ ಹಿಮ್ಮೆಟ್ಟಿಸಲು ಕಾರ್ಯತಂತ್ರದ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ನಾವು ಈ ಕೊರೊನಾ ವೈರಸ್ ಹಿಮ್ಮೆಟ್ಟಿಸುವ ಸಲುವಾಗಿ ತುರ್ತು ನಿಧಿಯನ್ನು ಸಂಗ್ರಹ ಮಾಡಬಹುದೆಂಬುದು ನನ್ನ ಸಲಹೆ. ನಾವೆಲ್ಲರೂ ಇದಕ್ಕೆ ಸ್ವಯಂಪ್ರೇರಿತರಾಗಿ ಕೊಡುಗೆ ನೀಡಬೇಕಾಗುತ್ತದೆ ಎಂದು ಸಾರ್ಕ್ ಮುಖಂಡರಿಗೆ ತಿಳಿಸಿದರು.
ಹಾಗೆಯೇ ಭಾರತ ಈ ತುರ್ತು ನಿಧಿ ಸಂಗ್ರಹಕ್ಕೆ ಆರಂಭಿಕವಾಗಿ 10 ಮಿಲಿಯನ್ ಡಾಲರ್ ನೀಡಬಹುದು ಎಂದು ಹೇಳಿದರು.
ಅಗತ್ಯವಿದ್ದಲ್ಲಿ ಯಾವುದೇ ಸದಸ್ಯ ದೇಶಕ್ಕೆ ವೈದ್ಯಕೀಯ ವೃತ್ತಿಪರರನ್ನು ಕಳುಹಿಸಲಾಗುವುದು. ಅಗತ್ಯವಿದ್ದಲ್ಲಿ ಅವರು ನಿಮ್ಮ ಸಹಾಯಕ್ಕೆ ಇರುತ್ತಾರೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ದಕ್ಷಿಣ ಏಷ್ಯಾದಲ್ಲಿ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನೆರವಿನೊಂದಿಗೆ ಜಂಟಿ ಸಂಶೋಧನಾ ವೇದಿಕೆ ಮಾಡುತ್ತದೆ ಎಂದು ಹೇಳಿದರು.
ಕೊರೊನಾ ವೈರಸ್ ತಡೆಗಟ್ಟಲು ಬೇಕಾದ ಎಲ್ಲಾ ನೆರವನ್ನು ಭಾರತ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಲ್ಡೀವ್ನ ಅಧ್ಯಕ್ಷರು ತಾಂತ್ರಿಕ ಮತ್ತು ವೈದ್ಯಕೀಯ ನೆರವು ನೀಡಿದ್ದಕ್ಕಾಗಿ ಮತ್ತು ತನ್ನ ಪ್ರಜೆಗಳನ್ನು ಸ್ಥಳಾಂತರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಹಾಗೆಯೇ ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ರಾಷ್ಟ್ರದ ಅಧ್ಯಕ್ಷರುಗಳು ಭಾರತ ನೀಡಿದ ಸಹಾಯದ ಭರವಸೆಗೆ ಹಾಗೂ ಮಾಲ್ಡೀವ್ಗೆ ಸಹಾಯ ಮಾಡಿದ ಹಿನ್ನಲೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ನಾವು ಒಗ್ಗಟ್ಟಾಗಿ ಕೊರೊನಾ ವೈರಸ್ನ್ನು ತಡೆಗಟ್ಟುವಲ್ಲಿ ಮುನ್ನುಗ್ಗಬೇಕು. ನಮ್ಮ ಒಗ್ಗಟ್ಟಿನಿಂದ ಕೊರೊನಾ ವೈರಸ್ನ್ನು ನಾಶ ಮಾಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೊರೊನಾ ವೈರಸ್ ಕುರಿತಾದ ಯಾವುದೇ ಚರ್ಚೆಗಳು ಇದ್ದರೂ ಸಾರ್ಕ್ ರಾಷ್ಟ್ರಗಳ ಆರೋಗ್ಯ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಬಹುದು ಎಂದು ಹೇಳಿದರು.
ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸ ಅವರು ವಿವಿಧ ಸವಾಲುಗಳನ್ನು ಎದುರಿಸಲು ಸಾರ್ಕ್ ಸದಸ್ಯರ ಮಂತ್ರಿಮಂಡಲದ ಗುಂಪನ್ನು ರಚಿಸುವಂತೆ ಸಲಹೆ ನೀಡಿದರು.
ಎಲ್ಲಾ ಸಾರ್ಕ್ ಸದಸ್ಯ ರಾಷ್ಟ್ರಗಳಲ್ಲಿ ಒಟ್ಟಾಗಿ 200 ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಭಾರತದಲ್ಲೇ 107 ಪ್ರಕರಣ ಪತ್ತೆಯಾಗಿದೆ.