ಬೆಂಗಳೂರು, ಮಾ.16 (DaijiworldNews/PY) : ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಸದ್ಯ ವಿಧಾನಸೌಧ, ವಿಕಾಸ ಸೌಧದ ನೌಕರರ ಮೇಲೂ ನಿಗಾ ಇಡಲಾಗಿದ್ದು, ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲು ಆದೇಶಿಸಲಾಗಿದೆ.
ಈ ವಿಚಾರವಾಗಿ ಸೋಮವಾರ ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾತನಾಡಿ, "ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ವಿಧಾನಸೌಧದಲ್ಲಿ ಥರ್ಮಲ್ ಸ್ಕ್ಯಾನರ್ ಬಳಸಲು ತಿಳಿಸಿದ್ದೇನೆ. ಈ ಬಗ್ಗೆ ಭಾನುವರವೇ ಆರೋಗ್ಯ ಅಧಿಕಾರಿಗಳಿಗಳಿಗೆ ಆದೇಶ ನೀಡಿದ್ದೇನೆ. ನಾನು ಸಿಎಂ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಆರೋಗ್ಯಾಧಿಕಾರಿಗಳೊಂದಿಗೆ ನಾನೂ ಕೂಡಾ ಸಭೆ ನಡೆಸುತ್ತೇನೆ. ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಆದಷ್ಟು ಎಲ್ಲರೂ ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ" ಎಂದು ತಿಳಿಸಿದರು.
ಈ ನಡುವೆ, ಸಿಎಂ ಬಿಎಸ್ವೈ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಥರ್ಮಲ್ ಸ್ಕ್ಯಾನಿಂಗ್ನಿಂದ ತಪಾಸಣೆ ಮಾಡಿ ಒಳಗೆ ಪ್ರವೇಶ ನೀಡಲಾಗುತ್ತಿದೆ.
ದೇಶಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ವಿಧಾನ ಸೌಧ, ವಿಕಾಸ ಸೌಧದಲ್ಲಿ ಥರ್ಮಲ್ ಸ್ಕ್ಯಾನರ್ ಬಳಸಲು ಶ್ರೀರಾಮಲು ಆದೇಶ, ನೌಕರರ ಮೇಲೂ ನಿಗಾ ವಹಿಸಲು ತಿಳಿಸಿದ್ದಾರೆ.
ಅಧಿಕಾರಿಗಳು ನಗರದ ಡಾಲರ್ಸ್ ಕಾಲೊನಿಯಲ್ಲಿರುವ ದವಳಗಿರಿ ನಿವಾಸದ ಎದುರು ತಪಾಸಣೆ ನಡೆಸುತ್ತಿದ್ದಾರೆ.