ನವದೆಹಲಿ, ಮಾ 16 ( Daijiworld News/MSP): ಭಾರತದಲ್ಲಿ ಇಲ್ಲಿಯವರೆಗೂ 114 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ನಡುವೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೂ ಕೊರೋನಾ ವೈರಸ್ ಸೋಂಕು ತಗುಲಿದ ಪರಿಣಾಮ ಕೇರಳದಲ್ಲಿ 30 ವೈದ್ಯರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಭಾರತದಲ್ಲಿ ಈಗಾಗಲೇ 114 ಮಂದಿ ಸೋಮ್ಕು ಪೀಡಿತರಲ್ಲಿ 13 ಮಂದಿ ಸಂಪೂರ್ಣ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೇರಳದಲ್ಲಿ ಕೊರೊನಾ ಸೋಂಕು ಅತಿ ಹೆಚ್ಚಾಗಿ ಕಂಡುಬಂದಿದ್ದು ಈಗಾಗಲೇ 22ಮಂದಿಯ ವರದಿ ಪಾಸಿಟಿವ್ ಬಂದಿದೆ. ಕೊರೊನಾ ವೈರಸ್ ವಿರುದ್ಧ ತಮ್ಮ ಜೀವದ ಬಗ್ಗೆ ಲೆಕ್ಕಿಸಿದೆ ಹೋರಾಡುತ್ತಿರುವ ವೈದ್ಯರಿಗೂ ಕೊರೋನಾ ಸೋಂಕು ತಗುಲಿದ ಭೀತಿ ಎದುರಾಗಿದ್ದು, ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗುಲಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯರ ಸಹೋದ್ಯೋಗಿಗಳ ಮೇಲೂ ತೀವ್ರ ನಿಗಾ ಇರಿಸಲಾಗಿದ್ದು, ಎಲ್ಲ ವೈದ್ಯರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ
ಇತ್ತೀಚೆಗೆ ಸ್ಪೇನ್ ಗೆ ತರೆಳಿದ್ದ ಈ ವೈದ್ಯ ಭಾರತಕ್ಕೆ ವಾಪಸ್ ಆಗಿದ್ದರು. ಬಳಿಕ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ಇದೀಗ ಆ ವೈದ್ಯರನ್ನು ಸಂಪರ್ಕಿಸಿದ್ದ ಇತರೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಕುಟುಂಬಸ್ಥರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.