ವಿಜಯಪುರ, ಮಾ.16 (Daijiworld News/MB) : ವಿಶ್ವಾದಾದ್ಯಂತ ಆತಂಕ ಸೃಷ್ಟಿ ಮಾಡಿರುವ ಕೊರೊನಾ ರೋಗಕ್ಕೆ ತಮ್ಮ ಬಳಿ ಸುಲಭ ಚಿಕಿತ್ಸಾ ವಿಧಾನವಿದೆ. ನಾನು ಈ ಸೋಂಕು ತಗುಲಿದೆ ರೋಗಿಗಳನ್ನು ಗುಣಪಡಿಸಲು ಸಿದ್ಧವಾಗಿದ್ದೇನೆ. ನನಗೆ ವಿಜಯಪುರ ಜಿಲ್ಲಾಡಳಿತ ಆಹ್ವಾನ ನೀಡಿದಲ್ಲಿ ಐಸೋಲೇಶನ್ ಘಟಕದಲ್ಲಿರುವ ಸೋಂಕು ಶಂಕಿತನಿಗೆ ಭಾರತೀಯ ಯೋಗ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಿದ್ಧ ಎಂದು ವಿಜಯಪುರ ಯೋಗ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ.ವಿಜಯಕುಮಾರ್ ಹೇಳಿದ್ದಾರೆ.
ಈ ಕುರಿತಾಗಿ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವನ್ನೇ ಆತಂಕಕ್ಕೆ ದೂಡಿರುವ ಈ ಮಾರಕ ರೋಗಕ್ಕೆ ಅಲೋಪತಿ ಔಷಧ ಇಲ್ಲದೆ ಇರಬಹುದು. ಆದರೆ ಎಲ್ಲಾ ರೋಗಕ್ಕೂ ಭಾರತೀಯ ಯೋಗ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ಇದೆ. ನನಗೆ ವಿಜಯಪುರ ಜಿಲ್ಲಾಧಿಕಾರಿಗಳು ಆಹ್ವಾನ ನೀಡಿದರೆ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಶನ್ ಘಟಕದಲ್ಲಿರುವ ಕೊರೊನಾ ಶಂಕಿತ ಸೋಂಕಿತನಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಚಿಕಿತ್ಸೆ ನೀಡಿ ಗುಣಪಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾನು ಕಳೆದ 38 ವರ್ಷಗಳಿಂದ ಯೋಗಸಾಧನೆ ಮಾಡಿದ್ದು ರಾಜ್ಯ-ಹೊರ ರಾಜ್ಯಗಳಲ್ಲಿ ನನ್ನದೇ ಆದ ಯೋಗ ಚಿಕಿತ್ಸಾ ಕೇಂದ್ರಗಳಿವೆ. ಹಾಗಾಗಿ ನನಗೆ ಯಾರೂ ಕೂಡಾ ಸವಾಲೆಸೆಯುವ ಪ್ರಶ್ನೆಯೇ ಇಲ್ಲ. ತಜ್ಞ ವೈದ್ಯರಿಂದಲೂ ಗುಣಪಡಿಸಲು ಆಗದ ಹಲವು ರೋಗಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ್ದೇನೆ. ಆದರೆ ನಾನು ಅದಕ್ಕಾಗಿ ಎಲ್ಲೂ ಕೂಡಾ ಪ್ರಚಾರ ಪಡೆದಿಲ್ಲ ಎಂದು ಹೇಳಿದರು.
ಕೆಮ್ಮು ಉಸಿರಾಟದ ತೊಂದರೆ ಸೃಷ್ಟಿಸಿ ಮನುಷ್ಯನ ಜೀವಕ್ಕೆ ಅಪಾಯ ತರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಇಲ್ಲದ ಮನುಷ್ಯ ರಕ್ತದ ಒತ್ತಡ, ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆಯಿಂದ ದೈಹಿಕವಾಗಿ ನಿತ್ರಾಣಗೊಂಡು ಹಾಸಿಗೆ ಹಿಡಿಯುವ ದುಸ್ಥಿತಿ ಬರುತ್ತದೆ ಎಂದರು.
ಅಷ್ಟು ಮಾತ್ರವಲ್ಲದೇ ಕೊರೊನಾ ಸೊಂಕು ಮಾತ್ರವಲ್ಲ ಕೆಮ್ಮು, ದಮ್ಮುಗಳಿಗೆ ಖರ್ಚಿಲ್ಲದೆಯೇ ಮನೆಯಲ್ಲಿಯೇ ಮದ್ದು ಮಾಡಿ ಗುಣಮಾಡಬಹುದು. ಮನೆಯಲ್ಲಿ ಇರುವ ಹಳೆಯ ಕಾಟನ್ ಬಟ್ಟೆಗಳನ್ನು ಸ್ವಚ್ಛವಾಗಿ ತೊಳೆದು ಇಸ್ತರಿ ಮಾಡಿ ಮುಖಕ್ಕೆ ಧರಿಸಿದರೆ ಖರ್ಚಿಲ್ಲದ ಮಾಸ್ಕ್ ಆಗುತ್ತದೆ. ಎಷ್ಟೇ ತೀವ್ರವಾದ ಕೆಮ್ಮಿದ್ದರೂ ಕಾಫಿಯಷ್ಟು ಬಿಸಿ ಇರುವ ನೀರನ್ನು ಕುಡಿದರೆ ಆ ಕೂಡಲೇ ಕಡಿಮೆ ಆಗುತ್ತದೆ. ಈ ರೀತಿಯಾಗಿ ಕೆಲವು ಸುಲಭ ವಿಧಾನದಿಂದ ಕೊರೊನಾ ರೋಗ ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು.