ಮಧ್ಯಪ್ರದೇಶ, ಮಾ.16 (Daijiworld News/MB) : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನವನ್ನು ಸ್ಪೀಕರ್ ಮಾರ್ಚ್ 26ಕ್ಕೆ ಮುಂದೂಡಿದ್ದು ಇದರಿಂದಾಗಿ ಕಾಂಗ್ರೆಸ್ ನೇತೃತ್ವದ ಕಮಲ್ನಾಥ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ.
ಇಂದು ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿದ್ದ ಬಿಜೆಪಿಯ ಪ್ರಯತ್ನಕ್ಕೆ ಬ್ರೇಕ್ ಹಾಕಿದಂತಾಗಿದ್ದು ಇದರಿಂದಾಗಿ ಕಾಂಗ್ರೆಸ್ ಸರ್ಕಾರಕ್ಕೆ ತಾತ್ಕಾಲಿಕವಾಗಿ ರಿಪೀಫ್ ದೊರೆತಿದೆ. ಕಾಂಗ್ರೆಸ್ಸಿನ 22 ಮಂದಿ ಶಾಸಕರು ಈಗಾಗಲೇ ಬೆಂಗಳೂರಿನ ರೆಸಾರ್ಟ್ಗಳಲ್ಲಿ ಉಳಿದುಕೊಂಡಿದ್ದು ಈ ಶಾಸಕರಿಗೂ ಈಗ ಶಾಕ್ ನೀಡಿದಂತಾಗಿದೆ.
ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರಿಗೆ ವಿರೋಧ ಪಕ್ಷ ಬಿಜೆಪಿ ಮುಖ್ಯಮಂತ್ರಿ ಕಮಲ್ನಾಥ್ ವಿಶ್ವಾಸ ಮತ ಯಾಚಿಸಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದೆ.
ಸ್ಪೀಕರ್ ವಿಶ್ವಾಸ ಮತ ನಿರ್ಣಯ ಮಾಡುವಂತೆ ಹೇಳಿದಾಗ ನಾವು ವಿಶ್ವಾಸಮತ ನಿರ್ಣಯಕ್ಕೆ ಹೆದರುವುದಿಲ್ಲ. ನಾವೆಲ್ಲರೂ ವಿಶ್ವಾಸ ಮತ ನಿರ್ಣಯ ಎದುರಿಸಲು ಸಿದ್ಧ. ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರಕ್ಕೂ ನಾವು ಬದ್ಧ ಎಂದು ಕಾಂಗ್ರೆಸ್ ಮುಖಂಡ ಸಚಿವ ಪಿ.ಸಿ.ಶರ್ಮಾ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಗೆ ತೆರಳುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಇದರಲ್ಲಿ ಗೌಪ್ಯವಾದದ್ದು ಯಾವುದೂ ಇಲ್ಲ. ಸ್ವೀಕರ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಪಾಲನೆ ಮಾಡುತ್ತೇವೆ. ನಾವು ವಿಶ್ವಾಸಮತ ನಿರ್ಣಯ ಯಾಚಿಸಲು ಸಿದ್ಧರಾಗಿದ್ದೇವೆ. ಅಲ್ಲದೆ, ಮುಖ್ಯಮಂತ್ರಿ ಕಮಲ್ ನಾಥ್ ಕೂಡ ಸಿದ್ಧರಿದ್ದಾರೆ" ಎಂದು ಹೇಳಿದ್ದರು.
ಆದರೆ, ನಮ್ಮ ಪಕ್ಷದ 16 ಮಂದಿ ಶಾಸಕರು ಕಾಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಕಮಲ್ ನಾಥ್ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಅವರನ್ನು ಪತ್ತೆ ಮಾಡಬೇಕು. ಅಲ್ಲದೆ, 16 ಮಂದಿ ಶಾಸಕರಿಲ್ಲದೆ ವಿಶ್ವಾಸಮತ ನಿರ್ಣಯ ಅಪೂರ್ಣವಾಗುತ್ತದೆ ಎಂದಿದ್ದರು.