ಲಖನೌ, ಮಾ.16 (Daijiworld News/MB) : ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ರಾಜಕೀಯ ಮೆರವಣಿಗೆ, ಹಿಂಸಾತ್ಮಕ ಪ್ರತಿಭಟನೆ ಅಥವಾ ದೊಂಬಿಗಳ ಸಂದರ್ಭದಲ್ಲಿ ಹಾನಿಯಾದರೆ, ಆರೋಪಿಗಳಿಂದಲೇ ನಷ್ಟ ವಸೂಲಿ ಮಾಡುವ ಮತ್ತು ಅವರ ಆಸ್ತಿಪಾಸ್ತಿಯನ್ನೇ ಮುಟ್ಟುಗೋಲು ಹಾಕುವ ಅವಕಾಶವಿರುವ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶದಲ್ಲಿ ಹೊರಡಿಸಲಾಗಿದೆ.
ಈ ಕುರಿತು ಭಾನುವಾರ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಸುಗ್ರೀವಾಜ್ಞೆ ಹೊರಡಿಸಿದೆ.
ಲಖನೌದಲ್ಲಿ ಸಿಎಎ-ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಗಲಭೆ ಮಾಡಿದ ಆರೋಪಿಗಳ ವಿವರ ಉಳ್ಳ ಪೋಸ್ಟರ್ಗಳನ್ನು ರಸ್ತೆ ಬದಿಯಿಂದ ತೆಗೆಯುವಂತೆ ಮಾರ್ಚ್ 9ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಶುಕ್ರವಾರ ಸಭೆ ಸೇರಿ ನಷ್ಟ ವಸೂಲಿ ಕುರಿತ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿ, ಅಂಗೀಕಾರ ಮಾಡಲು ರಾಜ್ಯಪಾಲರಿಗೆ ಕಳುಹಿಸಿತ್ತು.
ಈ ಸುಗ್ರೀವಾಜ್ಞೆಯ ಪ್ರಕಾರ, ಪ್ರತಿಭಟನೆ, ರಾಜಕೀಯ ಸಮಾವೇಶ, ಮುಷ್ಕರ ಅಥವಾ ಬಂದ್ ಮುಂತಾದವುಗಳಲ್ಲಿ ಭಾಗವಹಿಸುವವರು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಮಾಡಿದರೆ ಆ ವ್ಯಕ್ತಿಯೇ ಅದರ ನಷ್ಟ ತುಂಬಿಸಬೇಕು.
ಈ ಸುಗ್ರೀವಾಜ್ಞೆಯು ದಂಗೆ, ಗಲಭೆಗಳ ಸಂದರ್ಭಕ್ಕೂ ಅನ್ವಯವಾಗುತ್ತದೆ.
ಹಾಗೆಯೇ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಅಧಿಕಾರವಿರುವ ನಷ್ಟ ವಸೂಲಾತಿ ಮಂಡಳಿಯೊಂದನ್ನು ರಚನೆ ಮಾಡಲಾಗುತ್ತದೆ.
ಪೋಸ್ಟರ್ಗಳನ್ನು ಹಾಕಿರುವ ಕುರಿತಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಪೋಸ್ಟರ್ಗಳನ್ನು ಪ್ರಕಟಿಸುವ ಕುರಿತು ಯಾವುದೇ ಕಾನೂನು ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.
ಈ ಕುರಿತಾಗಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಖನ್ನಾ, "ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ, ರಾಜಕೀಯ ಮೆರವಣಿಗೆಗಳು, ಅಕ್ರಮ ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳಿಗೆ ಆಗಬಹುದಾದ ನಷ್ಟವನ್ನು ಆರೋಪಿಗಳೇ ತುಂಬಿಸಿಕೊಡುವಂತೆ ಮಾಡುವ ಉ.ಪ್ರ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪರಿಹಾರ ಸುಗ್ರೀವಾಜ್ಞೆ 2020 ಗೆ ಸಂಪುಟವು ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.
ರಾಜಕೀಯ ಮತ್ತು ಅಕ್ರಮ ಪ್ರತಿಭಟನೆಗಳ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ವತ್ತುಗಳ ನಷ್ಟ ವಸೂಲಿ ಮಾಡುವ ನಿಟ್ಟಿನಲ್ಲಿ ನಷ್ಟ ವಸೂಲಿ ಮಂಡಳಿಯನ್ನು ರಚಿಸುವ ಸುಪ್ರೀಂ ಕೋರ್ಟ್ ನಿರ್ಧಾರದ ಪ್ರಕಾರವೇ ಈ ಕುರಿತು ಸುಗ್ರೀವಾಜ್ಞೆ ತರುವ ನಿರ್ಣಯಕ್ಕೆ ಸಂಪುಟವು ಅಂಗೀಕಾರ ನೀಡಿದೆ ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಕಳೆದ ಡಿಸೆಂಬರ್ನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ 15 ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟನಾಗಿತ್ತು. ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದವರಿಂದಲೇ ನಷ್ಟ ವಸೂಲಿ ಮಾಡಲಾಗುತ್ತದೆ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಿಂದೆಯೇ ಎಚ್ಚರಿಸಿದ್ದರು.