ಹಾಸನ, ಮಾ.16 (DaijiworldNews/PY) : ಹಾಸನದ ಮೂಲದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ಗೆ ವ್ಯಾಕ್ಸಿನ್ ಕಂಡುಹಿಡಿಯುವ ತಂಡದಲ್ಲಿ ಸ್ಥಾನ ಪಡಿದಿದ್ದಾರೆ.
ಮಹದೇಶ ಪ್ರಸಾದ್ ಅವರು ಜಿಲ್ಲೆಯ ಅರಕಲಗೂಡು ತಾಲೂಕಿನವರಾಗಿದ್ದಾರೆ. ಇವರು ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜರ್ಮನಿಯಲ್ಲಿ ಮಹದೇಶ ಅವರು ವಿಜ್ಞಾನಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಕೊರೊನಾ ಹಿನ್ನೆಲೆ ವಿದೇಶದಲ್ಲಿರುವ ವಿಜ್ಞಾನಿಗಳು ಭಾರತಕ್ಕೆ ಮರಳಿ ಎಂದು ಹೇಳಿದ ಸಂದರ್ಭ ಮಹದೇಶ ಅವರು ಭಾರತಕ್ಕೆ ಮರಳಿದ್ದರು. ಆದರೆ, ಇದೀಗ ಅವರು ವಾಪಾಸ್ ಬೆಲ್ಜಿಯಂಗೆ ತೆರಳಿದ್ದಾರೆ.
ಸಂಶೋಧನೆಗೆ ಸಂಬಂಧಿಸಿದಂತೆ ಮಹದೇಶ ಅವರು ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯಲು ಯುರೋಪ್ ರಾಷ್ಟ್ರಗಳು ಒಗ್ಗೂಡಿ ಹತ್ತು ತಂಡ ರಚಿಸಿದ್ದು, ಕೊರೊನಾ ಔಷಧಿ ಕಂಡುಹಿಡಿಯಲು ವಿಶ್ವಸಂಸ್ಥೆ ಹತ್ತು ತಂಡ ರಚಿಸಿತ್ತು. ಹೆಮ್ಮೆಯ ಕನ್ನಡಿಗ ಮಹದೇಶ ಪ್ರಸಾದ್ ಅವರು ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಮೈಸೂರಿನಲ್ಲಿ ಮಹದೇಶ್ ಪ್ರಸಾದ್ ಅವರ ಕುಟುಂಬಸ್ಥರು ವಾಸವಾಗಿದ್ದಾರೆ.
ಡಾ. ಮಹದೇಶ ಪ್ರಸಾದ್ ಮೈಸೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್ಡಿ ಸ್ನಾತಕ ಪದವಿಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಇವರು ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಇವರು, ಬೆಲ್ಜಿಯಂ ದೇಶದಲ್ಲಿ 2019ರಲ್ಲಿ ವಿಸಿಟಿಂಗ್ ವೈರಾಲಜಿ ಫೆಲೋಶಿಪ್ ಅವಾರ್ಡ್, 2016ರಲ್ಲಿ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ರೀಸರ್ಚ್ ಬೋರ್ಡ್ನಿಂದ ಯಂಗ್ ಸೈಂಟಿಸ್ಟ್ ಅವಾರ್ಡ್, ಸ್ವೀಡನ್ ದೇಶದಲ್ಲಿ 2012ರಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, ಯುಎಸ್ಎ ದೇಶದಿಂದ 2010ರಲ್ಲಿ ಎನ್ಐಹೆಚ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಅವಾರ್ಡ್, ಜರ್ಮನಿಯಲ್ಲಿ 2009ರಲ್ಲಿ DAAD ಫೆಲೋಶಿಪ್ ಅವಾರ್ಡ್ ಗಳಿಸಿದ್ದಾರೆ.
ಇದರೊಂದಿಗೆ, ಕ್ಯಾನ್ಸರ್ ಜೆನೆಟಿಕ್ಸ್, ಬಯೋಕೆಮಿಸ್ಟ್ರಿ, ಸ್ಟೆಮ್ ಸೆಲ್ ಬಯಾಲಜಿ, ಸಿಸ್ಟಂ ವ್ಯಾಕ್ಸಿನಾಲಜಿ, ವೈರಾಲಜಿ, ಟ್ಯೂಮರ್ ವೈರಾಲಜಿ ಸೇರಿದಂತೆ ಹಲವು ವಿಷಯಗಳ ಕುರಿತು 16 ಪ್ರಬಂಧಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿದ್ದಾರೆ. ಅಲ್ಲದೆ, ಯೂರೋಪಿಯನ್ ಕೌನ್ಸಿಲ್ ಸರ್ಟಿಫೈಡ್ ಲ್ಯಾಬ್ ಅನಿಮಲ್ ಎಕ್ಸ್ಪರ್ಟ್ ಎಂದು ಮನ್ನಣೆ ನೀಡಿದೆ.