ಬೆಂಗಳೂರು, ಮಾ.16 (DaijiworldNews/PY) : "ಎಲ್ಲಾ ವೈದ್ಯಕೀಯ ಸರ್ಕಾರಿ ಕಾಲೇಜುಗಳ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ. ಕೊರೊನಾ ಹೇಗೆ ನಿಯಂತ್ರಣ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ವಾರ್ ರೂಂಗಳ ಆರಂಭ ಹಾಗೂ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು.
"ಮಂಗಳೂರು, ಹುಬ್ಬಳ್ಳಿ, ಹಾಸನ ,ಕಲಬುರ್ಗಿ ಸೇರಿ ಅನೇಕ ಕಡೆ ಮಾಡುತ್ತಿದ್ದೇವೆ. ಹೆಲ್ಪ್ ಡೆಸ್ಕ್ ಪ್ರತಿ ಜಿಲ್ಲೆಯಲ್ಲೂ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಪ್ರತೀ ಜಿಲ್ಲೆಯಲ್ಲೂ 150-250 ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲಾಗುವುದು. ಪ್ರತಿ ದಿನವೂ ವಿಡಿಯೋ ಕಾನ್ಫರೆನ್ಸ್ ನಡೆಸುತ್ತೇವೆ" ಎಂದು ತಿಳಿಸಿದರು.
"ಕಲಬುರ್ಗಿ ಪ್ರಕರಣದಲ್ಲಿ ಮತ್ತೊಬ್ಬರಿಗೆ ವೈರಸ್ ಪತ್ತೆಯಾಗಿದೆ. ಮೃತ ವೃದ್ದನ ಆರೈಕೆ ಮಾಡುತ್ತಿದ್ದ ಮಗಳಿಗೆ ವೈರಸ್ ತಗುಲಿದೆ. ಆಕೆ 77 ಜನರ ಜೊತೆ ಪ್ರಾಥಮಿಕ ಸಂಪರ್ಕ ಇದ್ದರು, 277 ಜನರೊಂದಿಗೆ ದೂರದಿಂದ ಸಂಪರ್ಕದಲ್ಲಿದ್ದರು. ಇಲಾಖೆ ಅವರ ಮೇಲೆಯೂ ನಿಗಾ ವಹಿಸಿದೆ" ಎಂದು ಮಾಹಿತಿ ನೀಡಿದರು.
ಸೂಪರ್ ಮಾರ್ಕೆಟ್ಗಳು ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಸಿಎಂ ಬಿಎಸ್ವೈ ಅವರು ಈ ವಿಚಾರವಾಗಿ ಸಭೆ ನಡೆಸಲಿದ್ದಾರೆ. ಅವುಗಳನ್ನು ಮುಚ್ಚಬೇಕಾ, ಬೇಡವೋ ಎಂಬುದರ ಬಗ್ಗೆ ಅಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳಿಎ ಸಿಎಂ ಅವರು ಮಾರ್ಗದರ್ಶನ ನೀಡಲಿದ್ದಾರೆ" ಎಂದು ತಿಳಿಸಿದರು.