ಬೆಂಗಳೂರು, ಮಾ.16 (Daijiworld News/MB) : ಕೆಫೆ ಕಾಫಿ ಡೇ ಸಂಸ್ಥೆ ನಡೆಸಿದ ತನಿಖೆಯಿಂದ ಸಂಸ್ಥೆಯ ಹಣಕಾಸು ದಾಖಲೆಗಳಲ್ಲಿ ಕನಿಷ್ಠ 2,000 ಕೋಟಿ ರೂ.ಗಳಷ್ಟು ಹಣದ ಲೆಕ್ಕ ದೊರೆಯುತ್ತಿಲ್ಲ ಎಂದು ತಿಳಿದು ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ ಅವರು ಕಳೆದ ವರ್ಷದ ಜುಲೈ ತಿಂಗಳಲ್ಲಿ ಮಂಗಳೂರಿನ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೈದ ಬಳಿಕ ಸಂಸ್ಥೆಯೇ ತನಿಖೆ ಆರಂಭ ಮಾಡಿದ್ದು ಈ ತನಿಖೆಯಲ್ಲಿ ಕನಿಷ್ಠ 2,000 ಕೋಟಿ ರೂ.ಗಳಷ್ಟು ನಾಪತ್ತೆಯಾಗಿದೆ ಎಂದು ತಿಳಿದು ಬಂದಿದರುವುದಾಗಿ ವರದಿಯಾಗಿದೆ.
ತನಿಖೆಯಲ್ಲಿ ಸಂಸ್ಥೆಯ ಆರ್ಥಿಕ ವಹಿವಾಟುಗಳ ಕುರಿತಾಗಿ ಕೆಫೆ ಕಾಫಿ ಡೇ ಆರ್ಥಿಕ ವಹಿವಾಟುಗಳು ಹಾಗೂ ಸಿದ್ಧಾರ್ಥ ಅವರ ಒಡೆತನದ ಇತರ ಕಂಪೆನಿಗಳ ಜೊತೆಗಿನ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಸುಮಾರು 100 ಪುಟಗಳಿಗೂ ಅಧಿಕ ಕರಡು ವರದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.
ಹಾಗೆಯೇ ಈ ತನಿಖಾ ವರದಿಯಲ್ಲಿ ಸಿದ್ಧಾರ್ಥ ಅವರ ಖಾಸಗಿ ಉದ್ಯಮಗಳ ನಡುವಿನ ನೂರಾರು ಆರ್ಥಿಕ ವಹಿವಾಟುಗಳ ಕುರಿತಾಗಿಯೂ ಮಾಹಿತಿಯಿದೆ ಎನ್ನಲಾಗಿದೆ.
ಈ ಕಂಪೆನಿಯ ವಕ್ತಾರರೋರ್ವರು ಈ ತನಿಖಾ ವರದಿ ಸಿದ್ಧ ಮಾಡಲಾಗುತ್ತಿದೆ, ಅಂತಿಮವಾಗಿಲ್ಲ ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ.