ನವದೆಹಲಿ, ಮಾ.16 (Daijiworld News/MB) : ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ ನೂರಾಕ್ಕೂ ಅಧಿಕ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಸೋಂಕು ವಾಣಿಜ್ಯ ಚಟುವಟಿಕೆಗೆ ಅಡ್ಡಿಯಾಗಿ ಭಾರತದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಬಹುದಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಂಕು ನೇರವಾಗಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಬಹುದು. ಸೋಂಕು ತಡೆಗಟ್ಟಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.
ಕೊರೊನಾ ಸೋಂಕು ಹರಡುವುದನ್ನು ಡಿಜಿಟಲ್ ಪಾವತಿ ವ್ಯವಸ್ಥೆ ಅನುಸರಿಸುವಂತೆಯೂ ಸಲಹೆ ನೀಡಿದ ಅವರು, ಈ ಸೋಂಕಿನಿಂದಾಗಿ ಭಾರತದ ಆರ್ಥಿಕತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಆರ್ಬಿಐ ಪರಿಶೀಲನೆ ನಡೆಸುತ್ತಿದೆ. ಕ್ರಮಗಳ ಕುರಿತು ಏಪ್ರಿಲ್ 3ರಂದು ಹಣಕಾಸು ನೀತಿ ಪರಿಶೀಲನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಯೆಸ್ ಬ್ಯಾಂಕ್ ಮೇಲಿನ ನಿರ್ಬಂಧ ಮಾರ್ಚ್ 18, ಬುಧವಾರ ಸಂಜೆ 6ರಿಂದ ಸಡಿಲಿಕೆಯಾಗಲಿದೆ. ಯೆಸ್ ಬ್ಯಾಂಕ್ ಠೇವಣಿದಾರರ ಹಣ ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಆತಂಕ ಪಡಲು ಯಾವುದೇ ಕಾರಣಗಳಿಲ್ಲ. ಬ್ಯಾಂಕ್ನ ಹೊಸ ಆಡಳಿತ ಮಂಡಳಿಯು ಮಾರ್ಚ್ 26ರಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಾಂಕ್ರಾಮಿಕ ಕಾಯಿಲೆ ಪರಿಣಾಮದಿಂದಾಗಿ ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗಲಿದ್ದು ಜಾಗತಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರಲಿದೆ. ಈ ಎಲ್ಲದರಿಂದ ಭಾರತದ ಬೆಳವಣಿಗೆಗೆ ಪೆಟ್ಟು ಬೀಳಬಹುದಾಗಿದೆ. ಪ್ರವಾಸೋದ್ಯಮ, ವಿಮಾನಯಾನ, ಪ್ರಾದೇಶಿಕ ಸಾರಕು ಸಾಗಣೆ, ದೇಶೀಯ ವಹಿವಾಟು, ಅತಿಥಿ ಸತ್ಕಾರ ಸೇವಾ ವಲಯಗಳು ಈಗಾಗಲೇ ನಷ್ಟಕ್ಕೆ ಒಳಗಾಗಿವೆ. ಷೇರುಪೇಟೆಗಳ ಮೇಲೂ ಇದರ ಪರಿಣಾಮ ಬೀರಿದೆ ಎಂದಿದ್ದಾರೆ.