ಭೋಪಾಲ್, ಮಾ.16 (Daijiworld News/MB) : ಮಧ್ಯಪ್ರದೇಶ ರಾಜ್ಯದ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಲ್ಲೇ ಇದ್ದು ನಾಳೆಯೇ ವಿಶ್ವಾಸ ಮತ ಸಾಬೀತಿ ಮಾಡುವಂತೆ ಮುಖ್ಯಮಂತ್ರಿ ಕಮಲನಾಥ್ ಸರ್ಕಾರಕ್ಕೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಬಿಜೆಪಿಯ 106 ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ಪಕ್ಷದ 22 ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಶೀಘ್ರದಲ್ಲಿ ವಿಶ್ವಾಸಮತಯಾಚನೆ ಆಗದಿದ್ದರೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳಿವೆ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನಾಳೆಯೇ ವಿಶ್ವಾಸಮತ ಸಾಬೀತು ಪಡಿಸುವಂತೆ ಕಮಲನಾಥ್ ಸರ್ಕಾರಕ್ಕೆ ರಾಜ್ಯಪಾಲ ಲಾಲ್ ಜೀ ಟಂಡನ್ ಅವರು ಸೂಚನೆ ನೀಡಿದ್ದಾರೆ.
ಕೊರೊನಾ ಭೀತಿಯ ನಡುವೆಯೂ ಸೋಮವಾರ ಮಧ್ಯಪ್ರದೇಶ ರಾಜಭವನ ಅತ್ಯಂತ ಚಟುವಟಿಕೆಯ ಸ್ಥಳವಾಗಿತ್ತು. ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಬಿಜೆಪಿ ಮುಂದಾಗಿದ್ದು ಕೊರೊನಾ ಭೀತಿ ಹಿನ್ನಲೆ ವಿಧಾನಸಭೆಯ ಕಲಾಪಗಳನ್ನು ಮಾರ್ಚ್ 26ಕ್ಕೆ ಮುಂದೂಡಲಾಗಿದೆ.