ಬೆಂಗಳೂರು, ಮಾ.17 (Daijiworld News/MB) : ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದ ಪೈಲಟ್ ವಾಹನ ಸೇವೆಯನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದ್ದು, ಕೇವಲ ಎಸ್ಕಾರ್ಟ್ ಮಾತ್ರ ಮುಂದುವರಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿದ್ದು, ತನಗೆ ಜೀವ ಬೆದರಿಕೆ ಇದ್ದು ಝಡ್ ಶ್ರೇಣಿಯ ಭದ್ರತೆ ಮುಂದುವರಿಸುವಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕೆ ಭದ್ರತೆ ವಾಪಸ್ ಪಡೆಯಲಾಗಿದೆ ಎಂಬ ಬಗ್ಗೆ ಗೃಹ ಸಚಿವರಾಗಲಿ, ನಗರ ಪೊಲೀಸ್ ಆಯುಕ್ತರಾಗಲಿ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಝಡ್ ಪ್ಲಸ್ ಭದ್ರತೆಯನ್ನು ಝಡ್ಗೆ ಇಳಿಸಲಾಗಿತ್ತು. ಆ ಬಳಿಕ ಎಸ್ಕಾರ್ಟ್ ಸೇವೆಗೆ ಒದಗಿಸಲಾಗಿದ್ದ ಇನ್ನೋವಾ ಕ್ರಿಸ್ಟಾ ವಾಹನವನ್ನು ವಾಪಸ್ ಪಡೆದು 2.61 ಲಕ್ಷ ಕಿ.ಮೀ. ಸಂಚರಿಸಿರುವ ಸ್ಕಾರ್ಪಿಯೋ ವಾಹನ ನೀಡಲಾಗಿದೆ. ಅದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಿಐಪಿ ಭದ್ರತೆಯ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗಳಿಗೆ, ವಿಪಕ್ಷ ನಾಯಕರಿಗೆ ಪೈಲಟ್ ಮತ್ತು ಎಸ್ಕಾರ್ಟ್ ಸೇವೆ ನೀಡಲಾಗುತ್ತದೆ. ಆದರೆ ಯಾವುದೇ ಕಾರಣ ನೀಡದೆ ಸಿದ್ದರಾಮಯ್ಯ ಮತ್ತು ಎಚ್ಡಿಕೆ ಅವರ ಪೈಲಟ್ ವಾಹನಗಳನ್ನು ಸೋಮ ವಾರ ಬೆಳಗ್ಗಿನಿಂದ ವಾಪಸ್ ಪಡೆಯಲಾಗಿದೆ.