ಆಗ್ರಾ, ಮಾ.17 (Daijiworld News/MB) : ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಭಾಗವಾಗಿ ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ಪ್ರೇಮಸೌಧ ತಾಜ್ಮಹಲ್ ಅನ್ನು ಕೂಡಾ ಬಂದ್ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್, ಅವರು ಕೊರೊನಾ ಮುನ್ನೆಚ್ಚರಿಕೆಯ ಭಾಗವಾಗಿ ಎಲ್ಲಾ ಸ್ಮಾರಕ, ಸಂಗ್ರಹಾಲಯಗಳನ್ನು ಮಾರ್ಚ್ 31 ರವರೆಗೆ ಮುಚ್ಚಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕೇವಲ ತಾಜ್ ಮಾತ್ರವಲ್ಲದೇ ದೇಶದ ಎಲ್ಲಾ ಐತಿಹಾಸಿಕ ಸ್ಮಾರಕಗಳು, ಮ್ಯೂಸಿಯಂಗಳನ್ನೂ ಕೂಡ ಬಂದ್ ಮಾಡಲಾಗಿದ್ದು, ಕೊರೊನಾ ಭೀತಿ ಕಡಿಮೆಯಾಗುವರೆಗೂ ಸಾರ್ವಜನಿಕರು ಈ ಸ್ಥಳಗಳಿಗೆ ಭೇಟಿ ನೀಡದಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.
ಭಾರತದಲ್ಲಿ ಈವರೆಗೆ 114 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ.