ಮುಂಬೈ, ಮಾ 17 ( Daijiworld News/MSP): ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿರುವ ವ್ಯಕ್ತಿಗಳ ಎಡಗೈ ಮೇಲೆ ಮುದ್ರೆ ಹಾಕಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ರೀತಿ ಕೈಗಳಿಗೆ ಮುದ್ರೆ ಹಾಕುವುದರಿಂದ ಸೋಂಕಿತ ವ್ಯಕ್ತಿಗಳನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯ ಬಳಿಕ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಲ್ಲಿ ಸುಮಾರು 7 ಜನರದಲ್ಲಿ ಸೋಂಕು ಪತ್ತೆಯಾಗಿದ್ದು, ಈ ಸೋಂಕಿತರು ಚಿಕಿತ್ಸಾ ಕೇಂದ್ರಗಳಿಂದ ಎಸ್ಕೇಪ್ ಆಗಿದ್ದಾರೆ. ಈ ರೀತಿ ರೋಗಿಗಳು ಪಲಾಯನ ಮಾಡುತ್ತಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವೈರಸ್ ತಗುಲಿರುವುದು ಅಪರಾಧವಲ್ಲ. ಆದರೆ, ಅವರಿಗೆ ಸೂಕ್ತ ವೈದ್ಯಕೀಯ ಹಾಗೂ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಜನರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದ್ದು, ಜಿಲ್ಲಾಡಳಿತಗಳು ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.