ನವದೆಹಲಿ, ಮಾ.17 (Daijiworld News/MB) : ಮಧ್ಯಪ್ರದೇಶ ವಿಧಾನಸಭೆಯಲ್ಲಿ 12 ಗಂಟೆಗಳೊಳಗೆ ವಿಶ್ವಾಸಮತ ಸಾಬೀತುಪಡಿಸಲು ಆದೇಶ ನೀಡುವಂತೆ ಕೋರಿ ಬಿಜೆಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಬೆಳಗ್ಗೆ 10:30ಕ್ಕೆ ಕೈಗೆತ್ತಿಕೊಳ್ಳಲಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯಮಂತ್ರಿ, ರಾಜ್ಯಾಪಾಲರು ಮತ್ತು ಸ್ಪೀಕರ್ ಗೆ ನೋಟಿಸ್ ಜಾರಿಗೊಳಿಸಿದೆ.
22 ಕಾಂಗ್ರೆಸ್ ಶಾಸಕರ ರಾಜೀನಾಮೆ ಬಳಿಕ ಬಹುಮತವಿಲ್ಲದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಸಂಕಷ್ಟದಲ್ಲಿದೆ. ಕಾಂಗ್ರೆಸ್ ತೊರೆದಿರುವ ಬಹುತೇಕ ಮಂದಿ ಕಳೆದ ವಾರ ಕಾಂಗ್ರೆಸ್ ತೊರೆದಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪರವಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ಬೆನ್ನಲ್ಲೇ ಈ 22 ಕಾಂಗ್ರೆಸ್ ಶಾಸಕರ ರಾಜೀನಾಮೆ ನೀಡಿದ್ದಾರೆ ಎಂಬುದು ಗಮನಾರ್ಹ.
ವಿಶ್ವದಾದ್ಯಂತ ಕೊರೊನಾ ವೈರಸ್ ಹಬ್ಬಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಭಾಗವಾಗಿ ಸೋಮವಾರ ಸ್ಫೀಕರ್ ವಿಧಾನಸಭೆಯನ್ನು ಮಾರ್ಚ್ 26 ಕ್ಕೆ ಮುಂದೂಡಿದರು. ಈ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಜೆಪಿ, 12 ಗಂಟೆಗಳೊಳಗೆ ವಿಶ್ವಾಸಮತ ಸಾಬೀತುಪಡಿಸಲು ಆದೇಶ ನೀಡುವಂತೆ ಮನವಿ ಮಾಡಿದೆ.