ಗದಗ, ಮಾ 17 ( Daijiworld News/MSP): ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಣ ಕ್ರಮಗಳು ಮುಂದುವರೆದಿದ್ದು, ಗದಗದಲ್ಲಿ ಲಂಡನ್ ನಿಂದ ಆಗಮಿಸಿದ್ದ ಮೂರು ವರ್ಷದ ಮಗುವಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ (ಕೋವಿಡ್ 19) ವೈರಸ್ ಸಂಬಂಧಿಸಿದಂತೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು 60 ಜನರಲ್ಲಿ ಇಂದು ಮತ್ತೇ 6 ಜನ ಸೇರ್ಪಡೆಯಾಗಿದ್ದು ಅವರಲ್ಲಿ 5 ಜನರ ಮೇಲೆ ಮನೆಯಲ್ಲಿ ನಿಗಾವಹಿಸಲಾಗುತ್ತಿದೆ.
ಇದರಲ್ಲಿ ಲಂಡನ್ ನಿಂದ ಆಗಮಿಸಿದ ಕುಟುಂಬದ ಮೂರು ವರ್ಷದ ಮಗುವನ್ನು ಗದಗ ವೈಧ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಂಕೆಯ ಮೇರೆಗೆ ದಾಖಲಿಸಲಾಗಿದ್ದು ಮಗುವಿನ ಪರೀಕ್ಷೆಗಾಗಿ ಸಂಗ್ರಹಿಸಿದ ಮಾದರಿಗಳನ್ನು ವರದಿಗಾಗಿ ಕಳುಹಿಸಿಕೊಡಲಾಗಿದೆ. ಈಗಾಗಲೆ ಜಿಲ್ಲೆಯಲ್ಲಿ 9 ಜನ ಶಂಕಿತರಲ್ಲಿ 7 ಮಂದಿಯ ವರದಿ ನೆಗೆಟಿವ್ ವರದಿ ಬಂದಿದ್ದು ಇನ್ನು 2 ಪ್ರಕರಣಗಳ ವರದಿಗಳು ಬರಲು ಬಾಕಿ ಇದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.