ಬೆಂಗಳೂರು, ಮಾ.17 (Daijiworld News/MB) : ಕೇಂದ್ರ ಸರ್ಕಾರ ಆಧಾರ್, ಎನ್ಪಿಆರ್ ಸೇರಿದಂತೆ ಅನೇಕ ವಿಚಾರವಾಗಿ ಸಾಮಾನ್ಯ ಜನರ ವೈಯಕ್ತಿಕ ನಡೆಗಳ ಮೇಲೆ ನಿಗಾ ಇಡುತ್ತಿದೆ. ತಮ್ಮ ಪಾಡಿಗೆ ಬದುಕಲು ದೇಶದ ಜನರಿಗೆ ಬಿಡಿ. ಅವರ ಮೇಲೆ ಕಣ್ಣಿಡಲು ಅವರೇನು ಭಯೋತ್ಪಾದಕರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಶಿವಕುಮಾರ್ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಸರ್ಕಾರ ಜನರ ವೈಯಕ್ತಿಕ ಬದುಕಿನಲ್ಲಿ ಮೂಗುತೂರಿಸುವುದು ಸರಿಯಲ್ಲ. ನೀವು ಜನರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ನೀವು ಅವರಿಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಬೇಡಿ ಎಂದು ಹೇಳಿದರು.
ದೇಶ ನೆಮ್ಮದಿಯಾಗಿರ ಬೇಕಾದರೆ ದೇಶದ ಜನರು ನೆಮ್ಮದಿಯಲ್ಲಿ ಬದುಕುವಂತಾಗಬೇಕು. ಆರ್ಥಿಕವಾಗಿ ಅವರು ಬಲವಾದರೆ ದೇಶ ಬಲವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿ ಕ್ಷೇತ್ರಕ್ಕೆ ಹೋಗಿ, ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ಅವರಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ನನ್ನ ಮನೆ ಬಳಿಯೇ ಆಗಲಿ ಅಥವಾ ಬೇರೆ ಕಡೆಗಳಲ್ಲಿ ಆಗಲಿ ಸಾವಿರಾರು ಜನರು ಸೇರುವುದು ಸೂಕ್ತ ಅಲ್ಲ. ಎರಡು ದಿನ ತಡವಾಗಬಹುದು. ಆದರೆ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತೇನೆ. ನಾವು ಗೆದ್ದಿರುವ ಕ್ಷೇತ್ರ ಹಾಗೂ ಸೋತಿರುವ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆದು ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಅಲ್ಲದೆ ಕಾರ್ಯಕರ್ತರ ಅಭಿಪ್ರಾಯಂತೆ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.