ಬೆಂಗಳೂರು, ಮಾ 17 ( Daijiworld News/MSP): ಅಮೇರಿಕಾದಿಂದ ಬೆಂಗಳೂರಿಗೆ ವಾಪಾಸ್ ಆಗಿದ್ದ, ಕರ್ನಾಟಕದಲ್ಲಿ ಕೊರೊನಾ ಧೃಡಪಟ್ಟ ಬೆಂಗಳೂರು ಮೂಲದ ಡೆಲ್ ಕಂಪನಿಯ ಟೆಕ್ಕಿ, ಆತನ ಪತ್ನಿ, ಮಗಳು ಕೊರೊನಾ ಸೋಮ್ಕು ವಿರುದ್ದ ಹೋರಾಡಿ ಗುಣಮುಖರಾಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಅಮೆರಿಕದಿಂದ ಹಿಂತಿರುಗಿದ್ದ ಡೆಲ್ ಕಂಪನಿಯ ಟೆಕ್ಕಿಗೆ ಮಾರ್ಚ್ 9ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಪ್ರಕರಣವಾಗಿತ್ತು. ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 9 ರಂದು ಪತ್ರಿಕಾಗೋಷ್ಟಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕರ್ನಾಟಕಕ್ಕೂ ಕೊರೊನಾ ಕಾಲಿಟ್ಟಿರುವ ವಿಚಾರವನ್ನು ದೃಢಪಡಿಸಿದ್ದರು.
ಟೆಕ್ಕಿಯ ಬಳಿಕ, ಟೆಕ್ಕಿಯ ಪತ್ನಿ, ಮಗಳು, ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಪ್ರಕರಣದಲ್ಲಿ ಇದೀಗ ಟೆಕ್ಕಿ, ಆತನ ಪತ್ನಿ, ಮತ್ತು ಮಗಳು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೊದಲ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಅಲ್ಲದೇ ರಾಜ್ಯದಲ್ಲಿ 10ಕ್ಕೆ ಏರಿಕೆಯಾಗಿದ್ದ ಕೊರೊನಾ ಪೀಡಿತ ಸಂಖ್ಯೆ 7ಕ್ಕೆ ಇಳಿಕೆಯಾಗಿದೆ.