ಬೆಂಗಳೂರು, ಮಾ 17(DaijiworldNews/SM): ತುಳು ಭಾಷೆಯನ್ನು ಸಂವಿಧಾನದ ಅನುಚ್ಛೇದ 8ರಲ್ಲಿ ಸೇರಿಸಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಿದ್ದು, ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಉತ್ತರ ನೀಡಿದ್ದಾರೆ.
ಎಂಟನೇ ಪರಿಚ್ಛೇದದಲ್ಲಿ 22 ಭಾಷೆಗಳಿವೆ. ಇನ್ನೂ 38 ಭಾಷೆಗಳನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಸರದಿಯಲ್ಲಿವೆ. ಆ ಪೈಕಿ 38ನೇ ಭಾಷೆ ತುಳುವಾಗಿದೆ. ಕರ್ನಾಟಕದ ಭಾಷೆಗಳ ಪೈಕಿ ಕೊಡವ, ಬಂಜಾರ, ತುಳು ಭಾಷೆ 8ನೇ ಷೆಡ್ಯೂಲ್ ನಲ್ಲಿ ಸೇರಿಸುವ ಪಟ್ಟಿಯಲ್ಲಿದೆ. ಇದಕ್ಕಾಗಿ ಕಾರ್ಯಗಳು ಪ್ರಗತಿಯಲ್ಲಿವೆ.
ಈ ಸಂಬಂಧ ಸೀತಾಕಾಂತ ಮಹಾಪಾತ್ರಾ ಸಮಿತಿಯ ವರದಿ ಪರಿಶೀಲನೆ ಬಳಿಕ ಅಂತರ್ ಇಲಾಖಾ ಸಮಿತಿ ರಚಿಸಲಾಗಿದೆ. ಸಮಿತಿ ಪರಿಶೀಲಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ದೆಹಲಿಗೆ ಹೋದಾಗ ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರ್ಪಡೆಯಾದ ಬಳಿಕ ಅದು ರಾಜ್ಯ ಭಾಷೆಯಾಗಲಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ಪ್ರತಿಕ್ರಿಯೆ ನೀಡಿದ್ದಾರೆ.