ಮೈಸೂರು, ಮಾ.18 (Daijiworld News/MB): ಹಕ್ಕಿಜ್ವರ ದೃಢಪಟ್ಟ ಕುಂಬಾರಕೊಪ್ಪಲಿನ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ 6,436 ಪಕ್ಷಿಗಳನ್ನು ಗುರುತಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಹತ್ಯೆ ಮಾಡುವ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ. ಈ ಕೋಳಿಗಳು ಮಾತ್ರವಲ್ಲದೆ ಈ ಪ್ರದೇಶದ ಮನೆಗಳಲ್ಲಿ ಸಾಕಿರುವ ಗೌಜಲಹಕ್ಕಿ, ಗಿಳಿ, ಪಾರಿವಾಳಗಳನ್ನೂ ನಾಶ ಮಾಡಲಾಗುತ್ತಿದೆ.
ಜಿಲ್ಲಾಡಳಿತವು ಕೋಳಿಗಳ ನಾಶಕ್ಕೆ ಐದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ರಚಿಸಿದ್ದು ಪ್ರತಿ ತಂಡಕ್ಕೆ ಸಾವಿರ ಪಕ್ಷಿಗಳನ್ನು ಕೊಲ್ಲುವ ಗುರಿ ನೀಡಲಾಗಿದೆ.
ಮಂಗಳವಾರ ಸಂಜೆಯವರೆಗೆ 4,100 ಕೋಳಿಗಳನ್ನು ನಾಶಪಡಿಸಲಾಗಿದ್ದು ಬುಧವಾರ ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ. ನಾಶ ಮಾಡಲಾದ ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿದೆ. ಸುಣ್ಣ ಹಾಗೂ ಮಣ್ಣು ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ಪರೀಕ್ಷೆಯಲ್ಲಿ ಕುಂಬಾರಕೊಪ್ಪಲಿನಲ್ಲಿ ಸತ್ತಿದ್ದ ಕೋಳಿ ಹಾಗೂ ಕೊಕ್ಕರೆಯಲ್ಲಿ ಎಚ್5ಎನ್1 ರೋಗಾಣು ಇರುವುದು ದೃಢಪಟ್ಟಿತ್ತು. ಪಕ್ಷಿಗಳು ಸತ್ತು ಬಿದ್ದಿದ್ದ ಸ್ಥಳದ ಸುತ್ತಲಿನ ಒಂದು ಕಿಲೊಮೀಟರ್ ಪ್ರದೇಶವನ್ನು 'ರೋಗಪೀಡಿತ' ವಲಯ, 1 ರಿಂದ 10 ಕಿಲೊಮೀಟರ್ ವರೆಗಿನ ಸುತ್ತಳತೆ ಪ್ರದೇಶವನ್ನು ‘ಜಾಗೃತ ವಲಯ’ ಎಂದೂ ಘೋಷಿಸಲಾಗಿದ್ದು 10 ಕಿಲೊಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗಿದೆ.
ಇನ್ನು ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಮತ್ತು ಮೈಸೂರಿನ ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಮಾಂಸದ ಕೋಳಿ ಫಾರ್ಮ್, ಹಿತ್ತಲ ಕೋಳಿಗಳನ್ನು ವೈಜ್ಞಾನಿಕವಾಗಿ ಅಧಿಕಾರಿಗಳು ನಾಶ ಮಾಡುವರು. ಬೆಂಗಳೂರಿನ ಹೆಬ್ಬಾಳ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹಾಗೂ ಭೋಪಾಲ್ನ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿದ್ದು, ಹಕ್ಕಿಜ್ವರ ಇರುವುದು ದೃಢಪಟ್ಟಿತು. ಹಕ್ಕಿಜ್ವರ ಕಾಣಿಸಿರುವ ಎರಡೂ ಕಡೆ 3 ತಿಂಗಳು ಸರ್ವೇಕ್ಷಣೆ ನಡೆಯಲಿದೆ. ನಾಶಪಡಿಸಿದ ಕೋಳಿಗಳಿಗೆ ಪರಿಹಾರ ನೀಡಲಾಗುತ್ತದೆ. 8 ವಾರದಲ್ಲಿ ಮೊಟ್ಟೆ ನೀಡುತ್ತಿದ್ದ ಕೋಳಿಗೆ ₹ 20, 8 ವಾರ ಮೀರಿದ ಕೋಳಿಗೆ ₹ 90, 6ವಾರದೊಳಗಿನ ಮಾಂಸದ ಕೋಳಿಗೆ ₹ 20, 6ವಾರ ಮೀರಿದ ಕೋಳಿಗೆ ₹70 ಪರಿಹಾರ ದೊರೆಯಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.