ಬೆಂಗಳೂರು, ಮಾ18( Daijiworld News/MSP): ರೆಸಾರ್ಟ್ ನಲ್ಲಿ ವಾಸ್ತವ್ಯವಿರುವ ಮಧ್ಯಪ್ರದೇಶದ ರೆಬೆಲ್ ಶಾಸಕರನ್ನು ಭೇಟಿಯಾಗಲು ಬಂದ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಮಲನಾಥ್ ಸರ್ಕಾರಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಸದ್ಯ ಬೆಂಗಳೂರಿನ ಯಲಹಂಕ ಬಳಿಯ ರಮಾಡಾ ಹೊಟೇಲ್ ನಲ್ಲಿ ತಂಗಿದ್ದಾರೆ. ಅವರನ್ನು ಭೇಟಿಯಾಗಲು ಬುಧವಾರ ಬೆಳಗ್ಗೆ ದ್ವಿಗಿಜಯ್ ಸಿಂಗ್ ಬಂದಿಳಿದರು.
ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಆಗಮಿಸಿದ್ದರು. ಆದರೆ ರೆಸಾರ್ಟ್ ಗೆ ಪೊಲೀಸ್ ಬಿಗು ಭದ್ರತೆ ಒದಗಿಸಲಾಗಿದ್ದು, ಕೈ ನಾಯಕರಿಗೆ ರೆಸಾರ್ಟ್ ಗೆ ಒಳ ಹೋಗದಂತೆ ಪೊಲೀಸರು ತಡೆದರು.
ಇದರಿಂದಾಗಿ ದಿಗ್ವಿಜಯ್ ಸಿಂಗ್ ರೆಸಾರ್ಟ್ ಮುಂದೆ ಪ್ರತಿಭಟನೆ ನಡೆಸಲಾರಂಭಿಸಿದರು. ಪೊಲೀಸರ ಮನವೊಲಿಕೆಗೆ ಪ್ರಯತ್ನಿಸಿದರೂ ಪ್ರತಿಭಟನೆ ಮುಂದುವರಿಸಿದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ದಿಗ್ವಿಜಯ್ ಸಿಂಗ್ ರನ್ನ ವಶಕ್ಕೆ ಪಡೆದಿದ್ಧಾರೆ. ಕಾಂಗ್ರೆಸ್ ನಾಯಕರನ್ನು ಅಮೃತಹಳ್ಳಿ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಇವರೊಂದಿಗೆ ಠಾಣೆಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಮಧ್ಯಪ್ರದೇಶದ ಹಲವು ಕಾಂಗ್ರೆಸ್ ನಾಯಕರಿದ್ದಾರೆ.