ನವದೆಹಲಿ, ಮಾ18( Daijiworld News/MSP): ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿರುವ ನಾಲ್ವರಿಗೆ ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಈ ನಡುವೆ ಆ ನಾಲ್ವರಲ್ಲಿ ಓರ್ವ ಅಪರಾಧಿಯ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
2012ರ ದೆಹಲಿಯ ನಿರ್ಭಯಾ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ಮಾರ್ಚ್ 20ರಂದು ಬೆಳಿಗ್ಗೆ 5.30ಕ್ಕೆ ನೇಣಿಗೇರಿಸುವಂತೆ ಎಂದು ದೆಹಲಿ ನ್ಯಾಯಲಯ ಡೆತ್ ವಾರೆಂಟ್ ಜಾರಿಗೊಳಿಸಿದೆ. ಅಪರಾಧಿಗಳಾದ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ ಠಾಕೂರ್ (31) ಅವರನ್ನು ಮಾರ್ಚ್ 20ರಂದು ನೇಣಿಗೇರಿಸಲು ನ್ಯಾಯಾಲಯ ಆದೇಶಿಸಿದೆ.
ಇದೀಗ ಅಕ್ಷಯ್ ಸಿಂಗ್ ಠಾಕೂರ್ ಹೆಂಡತಿ ಪುನೀತಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಔರಂಗಾಬಾದ್ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಕೋರಿರುವ ಪುನೀತಾ ತನ್ನ ಗಂಡನ ಕೃತ್ಯದ ನೆರಳಿನಿಂದ ಹೊರಬರಲು ತನಗೆ ಸಾಧ್ಯವಾಗುತ್ತಿಲ್ಲ. ಆತ ಈ ಕೃತ್ಯ ಎಸಗಿಲ್ಲ ಎಂದು ಎಷ್ಟೇ ಸಮಜಾಯಿಷಿ ನೀಡಿದರೂ ಜೀವನಪೂರ್ತಿ ನಿರ್ಭಯಾ ಅತ್ಯಾಚಾರಿ ಅಕ್ಷಯ್ ಸಿಂಗ್ ಠಾಕೂರ್ ಹೆಂಡತಿ ಎಂಬ ಗುರುತಿನೊಂದಿಗೆ ವಿಧವೆಯಾಗಿ ಬದುಕಲು ಸಾಧ್ಯವಿಲ್ಲ. ಹೀಗಾಗಿ, ಆತ ಗಲ್ಲಿಗೇರುವ ಮೊದಲು ತಮಗೆ ವಿಚ್ಛೇದನ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆಯ ಲಹಂಗ್-ಕರ್ಮ ಎಂಬ ಗ್ರಾಮದರಾದ ಅಕ್ಷಯ್ ಸಿಂಗ್ ಠಾಕೂರ್ ಇನ್ನು 2 ದಿನಗಳಲ್ಲಿ ಗಲ್ಲಿಗೇರಲಿದ್ದಾರೆ. ಈ ನಡುವೆ ಆತನ ಪತ್ನಿ ವಿಚ್ಚೇದನಕ್ಕೆ ಕೋರಿ ಅರ್ಜಿ ಸಲ್ಲಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.