ಬೆಂಗಳೂರು, ಮಾ.18 (Daijiworld News/MB) : ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ನಮಗೆ ನಮ್ಮದೇ ಆದ ರಾಜಕೀಯ ಕಾರ್ಯತಂತ್ರವಿದೆ. ಯಾವ ರೀತಿ ಪರಿಸ್ಥಿತಿ ನಿಭಾಯಿಸುವುದು ಎಂದು ನಮಗೆ ಗೊತ್ತಿದೆ. ಇಲ್ಲಿ ದಿಗ್ವಿಜಯ ಸಿಂಗ್ ಒಬ್ಬರೇ ಅಲ್ಲ ನಾನೂ ಕೂಡಾ ಇದ್ದೇನೆ. ಯಾವ ರೀತಿ ಅವರಿಗೆ ಬೆಂಬಲ ಕೊಡಬೇಕು ಎಂದು ಗೊತ್ತಿದೆ. ಆದರೆ ನಾನು ಕರ್ನಾಟಕದಲ್ಲಿ ಕಾನೂನಿಗೆ ಭಂಗ ಉಂಟು ಮಾಡಲು ಬಯಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಮಧ್ಯಪ್ರದೇಶದ 21 ಶಾಸಕರು ವಾಸ್ತವ್ಯ ಹೂಡಿರುವ ಬೆಂಗಳೂರಿನ ರಮಾಡ ಹೋಟೆಲ್ ಬಳಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಬುಧವಾರ ಬೆಳಗ್ಗೆ ಧರಣಿ ಕುಳಿತಿದ್ದರು. ಇವರೊಂದಿಗೆ ಡಿಕೆಶಿ ಕೂಡಾ ಇದ್ದರು. ಧರಣಿ ಕುಳಿತಿದ್ದ ದಿಗ್ವಜಯ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ದಿಗ್ವಿಜಯ ಸಿಂಗ್ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಈ ಮೊದಲು ಟ್ವೀಟ್ ಮಾಡಿದ್ದ ದಿಗ್ವಿಜಯ ಸಿಂಗ್ ಬಿಜೆಪಿ ಮಾದರಿ ಆಳ್ವಿಕೆ ಪ್ರಜಾತಂತ್ರ, ಶಾಸಕರು ಮುಖ್ಯಮಂತ್ರಿ ಬಳಿ ಮಾತನಾಡುವಂತಿಲ್ಲ, ಶಾಸಕರು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡುವಂತಿಲ್ಲ, ಶಾಸಕರು ಸ್ಪೀಕರ್ ಬಳಿ ಮಾತನಾಡುವಂತಿಲ್ಲ, ಶಾಸಕರು ಪಕ್ಷದ ಮುಖಂಡರ ಬಳಿ ಮಾತನಾಡುವಂತಿಲ್ಲ. ಶಾಸಕರು ನಿಯಂತ್ರಿತ ಪರಿಸ್ಥಿತಿಯಲ್ಲಿ ಮತ್ತು ವಿಪಕ್ಷದ ಗೂಂಡಾಗಳ ದುರುಗುಡುವ ನೋಟದಡಿಯಲ್ಲಿ ಮಾತ್ರ ಮಾತನಾಡಬಹುದು. ಇದನ್ನು ಪ್ರಜಾತಂತ್ರ ಎಂದು ಕರೆಯುತ್ತಾರೆ.! ಎಂದಿದ್ದರು.