ನವದೆಹಲಿ, ಮಾ.18 (Daijiworld News/MB) : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ದೇಶದಾದ್ಯಂತ ಭಾರತೀಯ ರೈಲ್ವೆ ಹಲವು ಪ್ರಮುಖ ಮಾರ್ಗಗಳು ಸೇರಿದಂತೆ 85 ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಹಾಗೆಯೇ ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ಲಾಟ್ಫಾರಂ ಟಿಕೆಟ್ ದರವನ್ನು 10 ರೂಪಾಯಿನಿಂದ 50 ರೂಪಾಯಿಗೆ ಹೆಚ್ಚಿಸಲು ಆದೇಶಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣದಿಂದಾಗಿ ಈ ವೈರಸ್ನ್ನು ತಡೆಗಟ್ಟುವ ಮುಂಜಾಗ್ರತ ಕ್ರಮಗಳ ಭಾಗವಾಗಿ ಮಂಗಳವಾರ ತಡರಾತ್ರಿ ರೈಲ್ವೆ ಸಚಿವ ಪಿಯೂಶ್ ಗೋಗೆಯ್ ನೇತೃತ್ವದಲ್ಲಿ ನಡೆದ ಪರಾಮರ್ಶನಾ ಸಭೆಯಲ್ಲಿ ಈ ನಿರ್ಧಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಾಂಕ್ರಾಮಿಕವಾಗಿ ಈ ರೋಗ ಹರಡುವುದನ್ನು ತಡೆಗಟ್ಟಲು ಪ್ರಯಾಣಿಕರು ಪಶ್ಚಿಮ, ಕೇಂದ್ರ ಹಾಗೂ ಪೂರ್ವ ಕರಾವಳಿ ರೈಲ್ವೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಟಿಕೆಟ್ಗಳನ್ನು ರದ್ದು ಮಾಡುತ್ತಿದ್ದಾರೆ. ಕಳೆದ ಕಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ರೈಲ್ವೆ ಟಿಕೆಟ್ಗಳನ್ನು ರದ್ದು ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ಗಳು ರದ್ದು ಮಾಡಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ.
ಈ ಸಭೆಯಲ್ಲಿ ರೈಲ್ವೆ ಮಂಡಲಿ ಅಧ್ಯಕ್ಷರು, ರೈಲ್ವೆ ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಭಾಗವಹಿಸಿದ್ದರು.
ರೈಲ್ವೆ ಮಂಡಳಿಯ ಕಾರ್ಯಾನಿರ್ವಾಹಕ ನಿರ್ದೇಶಕರು ಸೇರಿದಂತೆ ಆರು ಮಂದಿಯ ಕೊರೊನಾ ಸ್ಪಂದನೆ ತಂಡ ರಚನೆಗೆ ಕೂಡಾ ಸಚಿವಾಲಯ ನಿರ್ಧಾರ ಮಾಡಿದೆ.
ಈ ತಂಡ ಕೊರೊನಾ ತಡೆಗಟ್ಟುವ ಸಲುವಾಗಿ ಚಟುವಟಿಕೆಗಳನ್ನು ನಡೆಸಲಿದ್ದು ಆನ್ಲೈನ್ ಡ್ಯಾಷ್ಬೋರ್ಡ್ ಮತ್ತು ಇತರೆ ಫೋರಂಗಳ ಮೂಲಕ ಪರಿಸ್ಥಿತಿಯ ಮೇಳೆ ಕಣ್ಗಾವಲು ಇರಿಸಲಿದೆ. ಹಾಗೆಯೇ ರೈಲ್ವೆ ವಲಯಗಳ/ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವುದು, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದು, ಮಾಧ್ಯಮ ಟಿಪ್ಪಣಿ ನೀಡುವುದು ಮತ್ತು ಹಲವು ಪ್ರಮುಖ ಸಭೆಗಳಿಗೆ ಸ್ಥಿತಿಗತಿಯ ಬಗ್ಗೆ ವರದಿ ಸಿದ್ಧ ಮಾಡುವುದನ್ನು ಈ ತಂಡ ನಿರ್ವಹಣೆ ಮಾಡಲಿದೆ.