ಬೆಂಗಳೂರು, ಮಾ18( Daijiworld News/MSP): ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಈಗಾಗಲೇ ರಾಜ್ಯ ಸರ್ಕಾರ ಜನನಿಬಿಡ ಪ್ರದೇಶಗಳಾದ ಮಾಲ್, ಥಿಯೇಟರ್ ಸೇರಿದಂತೆ ಕ್ಲಬ್, ಪಬ್ಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವಂತೆ ಆದೇಶಿಸಲಾಗಿತ್ತು. ಆದರೆ ಇದೀಗ ಈ ಕರ್ನಾಟಕ ಬಂದ್ನ ಅವಧಿ ವಿಸ್ತರಿಸುವ ಸಾಧ್ಯತೆ ಕಂಡು ಬಂದಿದೆ.
ಕೊರೊನಾ ಹರಡುವಿಕೆ ಇನ್ನು ಸಂಪೂರ್ಣ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಬಂದ್ ಅವಧಿ ವಿಸ್ತರಿಸಿ ಒಂದು ವಾರ ಮುಂದುವರೆಸಲು ಸಿಎಂ ಬಿಎಸ್ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಸಚಿವ ಶ್ರೀರಾಮುಲು ಮಂಗಳವಾರ ಮಂಗಳೂರಿನಲ್ಲಿ ಮಾತನಾಡಿ, ಇದೇ ಸ್ಥಿತಿ ಮುಂದುವರಿದರೆ ಬಂದ್ ಅನಿವಾರ್ಯ ಎಂದು ವಿಸ್ತರಣೆಯ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಕೊರೊನಾ ರಾಜ್ಯದಲ್ಲಿ ಒಂದು ಬಲಿ ಪಡೆದಿದೆ. ಈಗಾಗಲೇ ದೇಶದಲ್ಲಿ 130ಕ್ಕೂ ಅಧಿಕ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲೂ ಹನ್ನೊಂದು ಮಂದಿ ಸೋಂಕು ಪೀಡಿತರಿದ್ದಾರೆ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಬಂದ್ ಅವಧಿಯನ್ನು ಮತ್ತೂ ಒಂದು ವಾರಕ್ಕೆ ಮುಂದುವರೆಸುವ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಸಲು ತುರ್ತು ಸಂಪುಟ ಸಭೆ ಕರೆದಿದೆ. ಈ ಸಭೆಯಲ್ಲಿ ಎಲ್ಲರೂ ಒಮ್ಮತಕ್ಕೆ ಬಂದು ಬಂದ್ ಅವಧಿಯನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿದರೆ ಬಂದ್ ಮುಂದುವರಿಸಲಾಗುತ್ತದೆ. ಒಂದೊಮ್ಮೆ ಒಪ್ಪಿಗೆ ಸಿಕ್ಕರೆ ಮುಂದಿನ ಒಂದು ವಾರದ ಕಾಲ ಶಾಲಾ-ಕಾಲೇಜು ಮಾಲ್ ಥಿಯೇಟರ್ ಸೇರಿದಂತೆ ಬಹುತೇಕ ಸಾರ್ವಜನಿಕ ವಲಯ ಬಂದ್ ಆಗಲಿದೆ.