ಬೆಂಗಳೂರು,ಮಾ18( Daijiworld News/MSP): ರೆಸಾರ್ಟ್ ನಲ್ಲಿ ವಾಸ್ತವ್ಯವಿರುವ ಮಧ್ಯಪ್ರದೇಶದ ರೆಬೆಲ್ ಶಾಸಕರನ್ನು ಭೇಟಿಯಾಗಲು ಬಂದ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಚಾರವಾಗಿ , ಸ್ಥಳೀಯ ಪೊಲೀಸರ ವರ್ತನೆಯನ್ನು ಪ್ರತಿಭಟಿಸಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು.
ಕಮಲನಾಥ್ ಸರ್ಕಾರಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು ಸದ್ಯ ಬೆಂಗಳೂರಿನ ಯಲಹಂಕ ಬಳಿಯ ರಮಾಡಾ ಹೊಟೇಲ್ ನಲ್ಲಿ ತಂಗಿದ್ದಾರೆ. ಅವರನ್ನು ಭೇಟಿಯಾಗಲು ಬುಧವಾರ ಬೆಳಗ್ಗೆ ದ್ವಿಗಿಜಯ್ ಸಿಂಗ್ ಹಾಗೂ ಹಲವು ಕಾಂಗ್ರೆಸ್ ನಾಯಕರು ರೆಸಾರ್ಟ್ ಬಳಿ ಬಂದಿದ್ದರು ಆದರೆ ಭೇಟಿಗೆ ಅವಕಾಶ ನೀಡದ ಕಾರಣ ಪ್ರತಿಭಟನೆಗೆ ಮುಂದಾದ ಸಿಂಗ್ ಹಾಗೂ ಹಲವು ಕಾಂಗ್ರೆಸ್ ನಾಯಕರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್, ದಿಗ್ವಿಜಯ್ ಸಿಂಗ್ ಹಾಗೂ ಮತ್ತಿತರರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ರೆಸಾರ್ಟ್ನಲ್ಲಿರುವ ಶಾಸಕರೇ ಕರೆ ಮಾಡಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದು, ತಮ್ಮನ್ನು ದಿಗ್ಬಂಧನದಲ್ಲಿಡಲಾಗಿದೆ ಎಂದು ಆತಂಕ ತೋಡಿಕೊಂಡಿದ್ದಾರೆ. ಹಾಗಾಗಿ ನಾವೆಲ್ಲಾ ಅವರನ್ನು ಭೇಟಿಯಾಗಿ ಮಾತನಾಡಲು ಮುಂದಾದೆವು. ಆದರೆ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡದೆ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಇಲಾಖೆಯ ಸಾಮರ್ಥ್ಯ ಕುಂದಿ ಹೋಗಿದ್ದು, ರಾಜ್ಯ ಸರ್ಕಾರ ಪೊಲೀಸರನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳುತ್ತಿದೆ ಇದೇ ವೇಳೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು
ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಮಾತನಾಡಲು ನಾವು ಪ್ರಯತ್ನಿಸಿದ್ದೆವು. ಆದರೆ ಅವರು ಫೋನ್ ಕರೆಯನ್ನೇ ಸ್ವೀಕರಿಸಲಿಲ್ಲ ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿದಾಗ ತಮ್ಮನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದಾರೆ. ಅದರಂತೆ ಅವರನ್ನು ಭೇಟಿ ಮಾಡಿ ನಮ್ಮ ದೂರು ಸಲ್ಲಿದ್ದೇವೆ ಎಂದು ಹೇಳಿದರು.