ಬೆಂಗಳೂರು, ಮಾ.18 (Daijiworld News/MB) : ರಾಜ್ಯದಲ್ಲೇ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೇಶದ ಮೊದಲ ಕೊರೊನಾ ಸಾವು ಪ್ರಕರಣವಾದ ಕಲಬುರಗಿಯಲ್ಲಿ ಬಂದ್ ವಾತಾವರಣ ಉಂಟಾಗಿದೆ. ಈ ಸಂದರ್ಭದಲ್ಲಿ ಜನರ ಆತಂಕ ದೂರ ಮಾಡಿ ದೈರ್ಯ ಹೇಳಬೇಕಾಗಿದ್ದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲಬುರಗಿಗೆ ಬಂದೇ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಗೋವಿಂದ ಕಾರಜೋಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಭಾವಪೂರ್ಣ ಶ್ರದ್ಧಾಂಜಲಿ ಎಂದು ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ, ಕೊರೊನಾ ಭೀತಿ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಮೊದಲ ಬಲಿ ರಾಜ್ಯದಲ್ಲೇ ಆಗಿದೆ. ಮೃತಪಟ್ಟ ಕೊರೊನಾ ಪೀಡಿತ ವ್ಯಕ್ತಿ ಕಲಬುರಗಿಯವರಾಗಿದ್ದು, ಇಡೀ ಜಿಲ್ಲೆ ಡೇಂಜರ್ ಝೂನ್ನಲ್ಲಿದೆ. ಕಲಬುರಗಿ ಜನ ಆತಂಕದಲ್ಲಿದ್ದಾರೆ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಕಾಲಿಟ್ಟಿಲ್ಲ, ಕಾಣೆಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ.
ಕಲಬುರಗಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ, ಭಾವಪೂರ್ಣ ಶ್ರದ್ಧಾಂಜಲಿ, ಗೋವಿಂದ ಕಾರಜೋಳ ಗೋವಿಂದ ನಾಮ ಹಾಡುತ್ತಿದ್ದಾರೆ, ಇಂತಹವರು ನಾಯಕರು ನಮಗೆ ಬೇಕಾ, ನಮ್ಮ ಉಪಮುಖ್ಯಮಂತ್ರಿ ಸತ್ತುಬಿಟ್ರ? ಮೊದಲಾದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಆರೋಗ್ಯ ಸಚಿವರಾದ ಶ್ರೀರಾಮುಲು ಕಲಬುರಗಿಗೆ ಭೇಟಿ ನೀಡಿ ಖುದ್ದು ಸಮಸ್ಯೆಯನ್ನು ವೀಕ್ಷಣೆ ಮಾಡಿದ್ದಾರೆ. ಆದರೆ ಗೋವಿಂದ ಕಾರಜೋಳ ಭೇಟಿ ನೀಡದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ. ಕಲಬುರಗಿಗೆ ಭೇಟಿ ಕೊಡುತ್ತೀರಾ ಎಂದು ಕಾರಜೋಳ ಅವರನ್ನು ಪ್ರಶ್ನಿಸಿದರೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಗರಂ ಆಗಿದ್ದಾರೆ.