ಕೊಡಗು, ಮಾ.18 (DaijiworldNews/PY) : ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಹಾಗೂ ಉಸ್ತುವಾರಿ ಸಚಿವ ಕಾಣೆಯಾಗಿದ್ದಾರೆ. ಹಾಗಾಗಿ ಅವರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಜಿಲ್ಲೆಯ ಜೆಡಿಎಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ದೂರು ನೀಡಿದ್ದಾರೆ.
ಕೊರೊನಾ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಸತತ ಎರಡನೇ ವಾರ ಇಡೀ ರಾಜ್ಯದಾದ್ಯಂತ ಸಾರ್ವಜನಿಕ ವಲಯದ ಬಂದ್ ಮುಂದುವರಿದಿದೆ. ಹಾಗಾಗಿ ಪ್ರಸಿದ್ದ ಪ್ರವಾಸಿ ತಾಣವಾದ ಕೊಡಗಿಗೂ ಪ್ರವಾಸಿಗಳನ್ನು ನಿರ್ಬಂಧಿಸಿದೆ. ಕೊರೊನಾ ವೈರಸ್ನಿಂದಾಗಿ ಜನರು ಆತಂಕಗೊಂಡಿದ್ದಾರೆ. ಆದರೆ, ಇಂತಹ ಸಂದರ್ಭ ಜನರಿಗೆ ಧೈರ್ಯ ಹೇಳಬೇಕಾದ ಪ್ರತಾಪ್ ಸಿಂಹ ಅವರು ಹಾಗೂ ಉಸ್ತುವಾರಿ ಸಚಿವ ಸದ್ಯ ಜಿಲ್ಲೆಗೆ ಆಗಮಿಸಿಲ್ಲ .
ಈ ಕಾರಣಕ್ಕಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಜೆಡಿಎಸ್ ಜಿಲ್ಲಾ ಮುಖಂಡರು ಎಸ್ಪಿ ಸುಮನ್ ಡಿ ಪನ್ಸೇಕರ್ ಅವರಿಗೆ ಲಿಖಿತ ದೂರು ನೀಡಿದ್ದು, ಮಾರಣಾಂತಿಕ ಕೊರೊನಾ ವೈರಸ್ ಜಿಲ್ಲೆಯಲ್ಲಿ ಹರಡಿದ್ದು, ಇಂತಹ ಸಮಯದಲ್ಲೂ ಈ ಕಡೆಗೆ ಜಿಲ್ಲೆಯ ಸಂಸದರು ಹಾಗೂ ಉಸ್ತುವಾರಿ ಸಚಿವರು ಬಂದಿಲ್ಲ. ಒಂದು ವೇಳೆ ಇವರನ್ನು ಯಾರಾದರೂ ಅಪಹರಿಸಿದ್ದಾರಾ? ಅಥವಾ ಕೊರೊನಾ ಇವರಿಗೂ ತಗುಲಿದೆಯಾ? ಇವರನ್ನು ಹುಡುಕಿ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.