ನವದೆಹಲಿ, ಮಾ.18 (Daijiworld News/MB) : ಕೊರೊನಾ ವೈರಸ್ ಮುನ್ನೆಚ್ಚರಿಕೆಯ ಭಾಗವಾಗಿ ದೇಶದಾದ್ಯಂತ ಶಾಲೆಗಳು ಮುಚ್ಚಲಾಗಿದ್ದು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಲಭ್ಯವಿರುವುದಿಲ್ಲ. ಈ ಕುರಿತಾಗಿ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿ ಸ್ಪಷ್ಟನೆ ನೀಡುವಂತೆ ಹೇಳಿದೆ.
ಬುಧವಾರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ್ದು ಶಾಲೆಗಳು ಮುಚ್ಚಿರುವಾಗ ಮಕ್ಕಳಿಗೆ ಹೇಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದೆ.
ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಪತ್ತೆಯಾದ ಬಳಿಕ ದೇಶದ ಹೆಚ್ಚಿನ ಭಾಗಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.
ಕೇರಳದಲ್ಲಿ ಶಾಲೆಗಳು ಮುಚ್ಚಿದ ಬಳಿಕ ಕೇಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಉಚಿತವಾಗಿ ಮನೆಗಳಿಗೆ ತಲುಪಿಸುವ ನಿರ್ಧಾರ ಕೈಗೊಂಡಿದ್ದು ಈಗ ಮಕ್ಕಳಿಗೆ ಊಟ ಮನೆಗೆ ಕಳುಹಿಸಲಾಗುತ್ತಿದೆ.