ಹೈದರಾಬಾದ್, ಮಾ18( Daijiworld News/MSP): ಕೊರೊನಾ ಬಳಿಕ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗಳಿಗೆ ಬೇಡಿಕೆ ಜಾಸ್ತಿಯಾದಂತೆ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿರುವಂತೆ, ನಕಲಿ ಹ್ಯಾಂಡ್ ಸ್ಯಾನಿಟೈಸರ್ ದಂಧೆಯೆ ಹುಟ್ಟಿಕೊಂಡಿದ್ದಾರೆ. ಕೊರೊನಾ ಭೀತಿಯನ್ನೇ ತಮ್ಮ ಬಂಡವಾಳವಾಗಿಸಿದ ಈ ಜಾಲ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಿ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಕಲಿ ಸ್ಯಾನಿಟೈಸರ್ ಗಳನ್ನು ಉತ್ಪಾದನೆ ಮಾಡುತ್ತಿದ್ದ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಬೇಧಿಸಿದ್ದು ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ. ರಾಚಕೊಂಡ ವಿಶೇಷ ತನಿಖಾ ದಳ, ಹೈದರಾಬಾದ್ ಪೊಲೀಸರು ಮತ್ತು ತೆಲಂಗಾಣ ಆಯುಶ್ ಆರೋಗ್ಯ ತಪಾಸಣಾಧಿಕಾರಿಗಳ ತಂಡ ದಾಳಿ ನಡೆಸಿದ್ದು 100 ಮಿ.ಲೀ ನ 25 ಸಾವಿರ ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಸುಮಾರು 40 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಜಾಲಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಜಾಲವೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ಮಾರಾಟ ಮಾಡಿದೆ ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ನಕಲಿ ಸ್ಯಾನಿಟೈಸರ್ ಮಾರಾಟದಿಂದ ಈ ಜಾಲ ಸುಮಾರು ಒಂದು ಕೋಟಿ 44 ಲಕ್ಷ ರೂ. ನಷ್ಟು ಹಣ ಗಳಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಸೆಮನ್ಸ್ ಕ್ಲೀನ್ ಸೆಮ್ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕೌಸ್ತುಭಾ ಕೋಕ್ಲೀನ್ ಎಂಬ ಹೆಸರಿನಲ್ಲಿ ನಕಲಿ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಈ ಜಾಲ ಕುಶೈಗಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಲಪಲ್ಲಿ ಸಕ್ರಿಯವಾಘಿ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.