ಮುಂಬೈ, ಮಾ.18 (DaijiworldNews/PY) : ಕೊರೊನಾ ವೈರಸ್ ವ್ಯಾಪಿಸುತ್ತಿರುವ ಈ ಸಂದರ್ಭ ಮಾಸ್ಕ್ಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ರಾಜ್ಯ ಕಾರಾಗೃಹಗಳು ಮಾಸ್ಕ್ಗಳನ್ನು ತಯಾರಿಸಲು ಸಿದ್ದವಾಗಿವೆ.
ಸಾಂದರ್ಭಿಕ ಚಿತ್ರ
ಈ ವಿಚಾರವಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು, "ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್ಗಳಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸುವ ಸಲುವಾಗಿ ಮಾಸ್ಕ್ಗಳನ್ನು ತಯಾರಿಸಲು ಮಹಾರಾಷ್ಟ್ರದಾದ್ಯಂತ ಕೇಂದ್ರ ಕಾರಾಗೃಹಗಳಲ್ಲಿನ ಕೈದಿಗಳಿಗೆ ತಯಾರಿಸಲು ಆರಂಭಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ಕಲ್ಪನೆಯನ್ನು ಜೈಲು ಆಡಳಿತವು ಅಂಗೀಕರಿಸಿದ್ದು ಹಾಗೂ ಉತ್ಪಾದನೆಯನ್ನು ಆರಂಭಿಸಿದೆ. ಈ ಮಾಸ್ಕ್ಗಳಲ್ಲಿ ಕೆಲವು ಖೈದಿಗಳಿಗೆ ಹಾಗೂ ಜೈಲು ಅಧಿಕಾರಿಗಳಿಗೆ ಉಪಯೋಗವಾಗುತ್ತಿವೆ. ಸರಬರಾಜಿಗೆ ಉಳಿದವುಗಳನ್ನು ಮಾರಾಟ ಮಾಡಲಾಗುತ್ತಿದೆ. ಕೈದಿಗಳಿಗೆ ಈ ಕೆಲಸಕ್ಕಾಗಿ ಸಂಬಳ ನೀಡಲಾಗುತ್ತಿದೆ "ಎಂದು ಹೇಳಿದ್ದಾರೆ.
"ಎಲ್ಲ ಹೊಸ ಕೈದಿಗಳನ್ನು ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಿಸುವಂತೆ ಜೈಲು ಆಡಳಿತಕ್ಕೆ ಗೃಹ ಸಚಿವರು ನಿರ್ದೇಶನ ನೀಡಿದ್ಧಾರೆ. ಅಧಿಕಾರಿಗಳಿಗೆ ಈಗಾಗಲೇ ಜೈಲುಗಳಲ್ಲಿರುವ ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸುವಂತೆಯೂ ಸೂಚಿಸಲಾಗಿದೆ" ಎಂದು ತಿಳಿಸಿದ್ಧಾರೆ.
"ಅಲ್ಲದೇ, ಕೆಲವು ಕೈದಿಗಳನ್ನು ಜನದಟ್ಟಣೆಯನ್ನು ತಡೆಗಟ್ಟಲು ಇತರ ಜೈಲುಗಳಿಗೆ ಸ್ಥಳಾಂತರಿಸಲಾಗುವುದು ಹಾಗೂ ತಲೋಜಾ ಜೈಲಿಗೆ ಮುಂಬೈಯ ಹೊಸ ಕೈದಿಗಳನ್ನು ಸ್ಥಳಾಂತರಿಸಲಾಗುವುದು. ಕುಟುಂಬಗಳಿಗೆ ಸದ್ಯಕ್ಕೆ ಕೈದಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗುವುದಿಲ್ಲ. ವೀಡಿಯೊ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಗಳಿಗೂ ವಿಚಾರಣೆ ನಡೆಸಲು ಕೋರಲಾಗಿದೆ" ಎಂದು ಹೇಳಿದರು.