ನವದೆಹಲಿ, ಮಾ.19 (Daijiworld News/MB) : ಕೊರೊನಾ ಸೋಂಕು ಶಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೊರೊನಾ ಶಂಕಿತನನ್ನು ತನ್ವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಸಿಡ್ನಿಯಿಂದ ವಾಪಸ್ ಆಗಿದ್ದು ಬುಧವಾರ ರಾತ್ರಿ 9 ಗಂಟೆಗೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ದೆಹಲಿ ಉಪ ಪೊಲೀಸ್ ಆಯುಕ್ತರು (ನೈಋತ್ಯ) ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕೃತರು ಸೋಂಕು ಶಂಕಿತ ವ್ಯಕ್ತಿಯನ್ನು ಬುಧವಾರ ಆಸ್ಪತ್ರೆಗೆ ಕರೆತಂದಿದ್ದರು. ಆ ಕೂಡಲೇ ಅವರನ್ನು ಐಸೋಲೇಷನ್ ವಾರ್ಡ್ಗೆ ದಾಖಲು ಮಾಡಲಾಗಿತ್ತು. ಇದಾದ ಸ್ವಲ್ಪ ಸಮಯದ ಬಳಿಕ ಆ ವ್ಯಕ್ತಿ ಆಸ್ಪತ್ರೆಯ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದಾಗಿದ್ದು ವರದಿಗಾಗಿ ಕಾಯಲಾಗುತ್ತಿತ್ತು. ಅವರು ಐಸೋಲೇಷನ್ ವಾರ್ಡ್ನ ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದರು. ಬಳಿಕ ಕಟ್ಟಡದ ಏಳನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ.