ನವದೆಹಲಿ, ಮಾ.19 (Daijiworld News/MB) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ನೇಣು ಗಂಬಕ್ಕೆ ಏರಿಸಲು ಸಕಲ ಸಿದ್ಧತೆಗಳು ನಡೆದಿದ್ದು, ಬುಧವಾರ ತಿಹಾರ್ ಜೈಲಿನ ಅಧಿಕಾರಿಗಳ ನೆರವಿನೊಂದಿಗೆ ಹ್ಯಾಂಗ್ಮನ್ ಪವನ್ ಅಣಕು ಮರಣದಂಡನೆಯನ್ನು ನೆರವೇರಿಸಿದ್ದಾರೆ.
ಬುಧವಾರ ಸಂಜೆ ಜೈಲಿನ ಅಧಿಕಾರಿಗಳು ಹಾಗೂ ಜೈಲು ವೈದ್ಯರ ನೆರವಿನೊಂದಿಗೆ ಹ್ಯಾಂಗ್ಮನ್, ನೇಣುಗಂಬಕ್ಕೇರಿಸುವ ಅಣಕು ಕಾರ್ಯಾಚರಣೆ ಕೈಗೊಂಡಿದ್ದು ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಕೋರ್ಟ್ ನಿರ್ದಿಷ್ಟಪಡಿಸಿದಂತೆ ಮರಣದಂಡನೆ ಜಾರಿಗೆ ಸಕಲ ಸಿದ್ಧತೆಗಳಾಗಿದೆ ಎಂದು ದೆಹಲಿ ಕಾರಾಗೃಹ ವಿಭಾಗದ ಮಹಾನಿರ್ದೇಶಕ ಸಂದೀಪ್ ಗೋಯಲ್ ಹೇಳಿದ್ದಾರೆ.
ಆರೋಪಿಗಳು ಮರಣದಂಡನೆ ಮುಂದೂಡುವಂತೆ ಹಲವು ಮನವಿಗಳನ್ನು ಮಾಡಿದ್ದು ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಜೈಲಿನ ಅಧಿಕಾರಿಗಳು ತರಲಿದ್ದಾರೆ.
ಈ ಮಧ್ಯೆ ಓರ್ವ ಆರೋಪಿಯ ವಕೀಲರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡನೇ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ಆರೋಪಿ ಅಕ್ಷಯ್ ಭೇಟಿಗಾಗಿ ಆತನ ಕುಟುಂಬ ಗುರುವಾರ ದೆಹಲಿಗೆ ಬರಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಹಲವಾರು ಬಾರೀ ನಿರ್ಭಯಾ ಅತ್ಯಾಚಾರಿಗಳ ಗಲ್ಲು ಮುಂದೂಡಿಕೆ ಆಗಿದ್ದು ಈಗ ಅಪರಾಧಿಗಳು ಅಂತರ್ರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಾರಿಯೂ ಗಲ್ಲು ಮುಂದೂಡಿಕೆ ಆಗಬಹುದೇ ಎಂಬ ಅನುಮಾನಗಳು ಉಂಟಾಗಿದೆ.
ಈ ನಡುವೆ ಆರೋಪಿಗಳ ಗಲ್ಲಿಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು ಆರೋಪಿಗಳು ಸ್ವಯಂ ಹಾನಿ ಮಾಡಿಕೊಳ್ಳದಂತೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.